

ತಮಿಳುನಾಡು: ಭಾರತೀಯ ಚಿತ್ರರಂಗ ಕಂಡಂತಹ ಅದ್ಬುತ ಕಲಾವಿದೆ, ಬಾಲಿವುಡ್ನ ಹಿರಿಯ ನಟಿ ಶ್ರೀದೇವಿ ಅವರ ಇಬ್ಬರ ಪುತ್ರಿಯರ ಪೈಕಿ ಓರ್ವ ಮಗಳು ಬಾಲಿವುಡ್ ಹೊರತುಪಡಿಸಿ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದು, ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ನಿರ್ಮಿಸಲು ಮುಂದಾಗಿರುವುದು ಮತ್ತಷ್ಟು ವಿಶೇಷವಾಗಿದೆ. ಅಷ್ಟಕ್ಕೂ ಇದು ಜಾನ್ವಿನಾ ಅಥವಾ ಖುಷಿನಾ? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.
ಶ್ರೀದೇವಿ ಅವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಇಬ್ಬರು ಕೂಡ ಬಾಲಿವುಡ್ ಅಂಗಳದಲ್ಲಿ ಮಿಂಚಲು ಸಕಲ ತಯಾರಿಗಳಲ್ಲಿ ತೊಡಗಿದ್ದು, ಹೆಚ್ಚು ವಿಭಿನ್ನ ಹಾಗೂ ಹೊಸ ಹೊಸ ಪ್ರಾಜೆಕ್ಟ್ನತ್ತ ಗಮನಹರಿಸುತ್ತಿದ್ದಾರೆ. ಈ ಪೈಕಿ ಖುಷಿ ಕಪೂರ್ ಇದೀಗ ದಾಪುಗಾಲು ಇಟ್ಟಿದ್ದು, ಶೀಘ್ರವೇ ತಮಿಳು ಸಿನಿಮಾ ಮಾಡುವ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ನೆಟ್ಫ್ಲಿಕ್ಸ್ ಪಸ್ತುತ ಪಡಿಸುತ್ತಿರುವ 'ದಿ ಆರ್ಚೀಸ್' ಚಿತ್ರದಲ್ಲಿ ಖುಷಿ ಕಪೂರ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದು, ಈ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಮುಂದಾಗಿದ್ದಾರೆ. ಅಂದ್ಹಾಗೆ ಖುಷಿ ಶೀಘ್ರದಲ್ಲೇ ದಕ್ಷಿಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ವ್ಯಾಪಕವಾಗಿ ಕೇಳಿಬಂದಿದ್ದು, ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ತಮಿಳು ಚಿತ್ರದಲ್ಲಿ ಕುಶಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ಆಕಾಶ್ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ತಮಿಳಿನ ನಾಯಕ ಆಧರ್ವ ಜತೆ ಖುಷಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಚಿತ್ರದ ಮುಖೇನ ಇದೀಗ ಖುಷಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಸದ್ಯ ಖುಷಿ ಕಪೂರ್ ಅವರನ್ನು ಕಾಲಿವುಡ್ ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ,(ಏಜೆನ್ಸೀಸ್).