More

  ಜಾತಿ ಜೇನುಗೂಡು ಚಿಂತೆಗೀಡು: ರಕ್ಷಣಾತ್ಮಕ ತಂತ್ರಕ್ಕೆ ಸರ್ಕಾರ ಮೊರೆ, ಜಾತಿಗಣತಿ ವರದಿ ಸಾರ ಬಳಕೆಗೆ ಚಿಂತನೆ

  ಬೆಂಗಳೂರು: ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ವಿವಾದದ ಕಿಚ್ಚು ಹೊತ್ತಿಸಿರುವ ಎಚ್. ಕಾಂತರಾಜು ಆಯೋಗದ ಜಾತಿಗಣತಿ ವರದಿ ಬಗ್ಗೆ ರಾಜ್ಯ ಸರ್ಕಾರ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿದೆ. ಜಾತಿ, ಉಪಜಾತಿಗಳ ಬಲಪ್ರದರ್ಶನಕ್ಕೆ ಇದು ವೇದಿಕೆಯಾಗಬಾರದು ಎಂಬ ಕಾರಣಕ್ಕೆ ವರದಿಯ ಸಾರವನ್ನು ಮಾತ್ರ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆರ್ಥಿಕ ದುರ್ಬಲರ ಮೀಸಲಿಗೆ (ಇಡಬ್ಲ್ಯುಎಸ್) ಪ್ರತಿಯಾಗಿ ಈ ವರದಿಯನ್ನು ಉಪಯೋಗಿಸಲು ಉತ್ಸುಕವಾಗಿದೆ. ಜತೆಗೆ ಇನ್ನಷ್ಟು ತಳರ್ಸ³ಯಾಗಿ ಸಾಮಾಜಿಕ ನ್ಯಾಯ ವಿತರಿಸಲು ರಾಜ್ಯ ಸರ್ಕಾರ ಬಯಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

  ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ 2015ರಲ್ಲಿ ಆದೇಶಿಸಲಾಗಿತ್ತು. ಆದರೆ ಅಂದಿನ ಅಧ್ಯಕ್ಷ ಎಚ್. ಕಾಂತರಾಜು ಆಯೋಗವು ಅಸಲು ವಿಷಯದ ಬದಲು ಜಾತಿ, ಉಪಜಾತಿವಾರು ಅಂಕಿ-ಅಂಶ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದೆ. ಅದೂ ಅರೆಬರೆಯಾಗಿದೆ ಎಂಬ ಆರೋಪವೂ ಇದೆ. ಪ್ರತಿಪಕ್ಷಗಳು, ಆಯ್ದ ಸಮುದಾಯಗಳು, ಸಂಘಟನೆಗಳು ಮಾತ್ರವಲ್ಲ ಸ್ವಪಕ್ಷದವರು ಕೂಡ ಅಪಸ್ವರಕ್ಕೆ ಧ್ವನಿಗೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಅಸಲಿ ಉದ್ದೇಶ ಈಡೇರಿಸುವತ್ತ ಗಮನ ಕೇಂದ್ರೀಕರಿಸಲು ಸರ್ಕಾರ ಮುಂದಾಗಿದೆ.

  ಸ್ವೀಕಾರ ಬಹುತೇಕ ಖಚಿತ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರ ಅವಧಿ ಇನ್ನೊಂದು ತಿಂಗಳು ವಿಸ್ತರಿಸಿ, ವರದಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ. ಈ ಮೂಲಕ ವರದಿ ಸ್ವೀಕಾರ ಖಚಿತವೆಂಬ ಸ್ಪಷ್ಟ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವಾನಿಸಿದ್ದಾರೆ. ಆಯೋಗ ವರದಿ ಸಲ್ಲಿಸಿದ ನಂತರ ಪರಿಶೀಲನೆಗೆ ಸಚಿವ ಸಂಪುಟದ ಉಪಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಕಾನೂನು, ಸಾಮಾಜಿಕ, ಆರ್ಥಿಕ ತಜ್ಞರನ್ನು ಒಳಗೊಳ್ಳಲಿದೆ.

  ನಿರ್ದಿಷ್ಟ ಶಿಫಾರಸುಗಳ ಸಹಿತ ಉಪಸಮಿತಿ ನೀಡಲಿರುವ ವರದಿಯನ್ನು ಸಚಿವ ಸಂಪುಟ ಸಭೆ ಹಾಗೂ ವಿಧಾನ ಮಂಡಲದ ಅಧಿವೇಶನದ ಅನುಮೋದನೆಗೆ ಮಂಡಿಸಲು ಆಲೋಚಿಸಿದೆ. ಆಡಳಿತಾತ್ಮಕವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಉನ್ನತಾಧಿಕಾರಿಗಳು ಉಪ ಸಮಿತಿಗೆ ಮಾಹಿತಿ ನೀಡುತ್ತಾರೆ. ಆದರೆ ಅನುಷ್ಠಾನದ ವಿಧಾನ, ನೆರವು ಸಮಾನ ವಿತರಣೆ, ಅವಕಾಶಗಳ ಹಂಚಿಕೆಗೆ ಆದ್ಯತೆ ಬಗ್ಗೆ ತಜ್ಞರು ಸಲಹೆ ನೀಡಲಿದ್ದು, ಕಾನೂನಾತ್ಮಕ ಬಲಕ್ಕೂ ಒತ್ತು ನೀಡಲಿದೆ.

  ಸಮುದಾಯಗಳ ಪರಿಸ್ಥಿತಿ ಅಧ್ಯಯನ
  ಜಾತಿ-ಉಪಜಾತಿ ಬಲಾಬಲ ಅಳೆಯುವುದರ ಬದಲು ಆಯಾ ಸಮುದಾಯಗಳ ಪರಿಸ್ಥಿತಿ, ವಸ್ತುಸ್ಥಿತಿ ಆಧರಿಸಿ ಹೆಚ್ಚಿನ ನೆರವು ನೀಡಬೇಕು ಎನ್ನುವುದು ಸಿಎಂ ಸಿದ್ದರಾಮಯ್ಯ ಒಲವು. ಹೀಗಾಗಿ ವರದಿ ಸ್ವೀಕರಿಸಬೇಕೆಂಬ ದೃಢ ನಿಲುವನ್ನು ಅವರು ತಳೆದಿದ್ದಾರೆ. ಕಾಂತರಾಜು ಆಯೋಗವು 56 ವಿಷಯ ಪಟ್ಟಿ (ಕಾಲಂ)ಗಳ ಆಧಾರದಲ್ಲಿ ಸಮೀಕ್ಷೆ ನಡೆಸಿ, ದತ್ತಾಂಶ ತುಂಬಿದೆ. ಜಾತಿ-ಉಪ ಜಾತಿವಾರು ಜನಸಂಖ್ಯೆಗೆ ಹೆಚ್ಚಿನ ಆದ್ಯತೆ ನೀಡದೆ ಆಯಾ ಸಮುದಾಯಗಳ ವಸ್ತುಸ್ಥಿತಿ ಮಾಹಿತಿ ಮೇಲೆ ಸರ್ಕಾರ ಗಮನ ಕೇಂದ್ರೀಕರಿಸಲಿದೆ. ವೀರಶೈವ-ಲಿಂಗಾಯತ, ಒಕ್ಕಲಿಗ, ಮುಸ್ಲಿಮರು, ಕುರುಬರು, ಈಡಿಗರು, ಜೈನರು ಹೀಗೆ ಒಟ್ಟಾಗಿ ಜಾತಿ-ವರ್ಗಗಳನ್ನು ನೋಡಿದರೆ ಹಿಂದುಳಿದಿರುವಿಕೆ ಗೊತ್ತಾಗುವುದಿಲ್ಲ. ಆಯಾ ಜಾತಿ-ವರ್ಗಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಉಪಜಾತಿ, ಉಪ ವರ್ಗಗಳಿವೆ. ಹೀಗಾಗಿ ಎಲ್ಲ ಜಾತಿ-ವರ್ಗಗಳನ್ನು ಹಿಂದುಳಿದಿರುವಿಕೆ ಆಧಾರದಲ್ಲಿ ವರ್ಗೀಕರಿಸಿ ಸವಲತ್ತು ಹಂಚಿಕೆ ಮಾಡುವುದು ಸರ್ಕಾರದ ಚಿಂತನೆಯ ಸಾರವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದರಲ್ಲಿ ರಾಜಕೀಯ ಲಾಭದ ಲೆಕ್ಕಾಚಾರವು ಅಡಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ, ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಇದನ್ನು ಅಸ್ತ್ರವಾಗಿ ಬಳಕೆ ಮಾಡಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

  ವಿರೋಧ ಅರ್ಥಹೀನ ಎಂದ ಸಿಎಂ
  ಎಚ್. ಕಾಂತರಾಜು ವರದಿಯಲ್ಲಿ ಏನಿದೆ ಎಂದು ತಿಳಿಯದೇ ವಿರೋಧ ಮಾಡುವುದು ಅರ್ಥಹೀನ. ವರದಿ ಸ್ವೀಕರಿಸಿದ ನಂತರವಷ್ಟೇ ವಾಸ್ತವಾಂಶ ಗೊತ್ತಾಗುತ್ತದೆ. ಅದಕ್ಕೂ ಮುನ್ನ ಅಪಸ್ವರ ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 167 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿ ಸಿದ್ಧವಾಗಿದೆ. ಪರಿಶೀಲಿಸಿ ವರದಿ ಸಲ್ಲಿಸುವುದಕ್ಕೆ ಅನುಕೂಲವಾಗಲೆಂದು ಕೆ.ಜಯಪ್ರಕಾಶ್ ಹೆಗ್ಡೆಯವರ ಅಧ್ಯಕ್ಷ ಸ್ಥಾನದ ಅವಧಿ ಡಿಸೆಂಬರ್​ವರೆಗೆ ವಿಸ್ತರಿಸಲಾಗಿದೆ. ವರದಿ ಸ್ವೀಕರಿಸುವ ತನಕ ನಿಜಾಂಶ ತಿಳಿಯದು. ಈ ವಿಚಾರವಾಗಿ ಡಿ.ಕೆ.ಶಿವಕುಮಾರ್ ನನ್ನೊಂದಿಗೆ ರ್ಚಚಿಸಿಲ್ಲ. ವರದಿಯ ಮೂಲ ಪ್ರತಿ ಕಳೆದುಹೋಗಿದ್ದರ ಮಾಹಿತಿಯಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  ವರದಿ ವಿರುದ್ಧ ಸಹಿ ಮಾಡಬಾರದೇ?
  ಕಾಂತರಾಜು ವರದಿ ಸ್ವೀಕಾರ ವಿರೋಧಿಸಿದ ಪತ್ರಕ್ಕೆ ಸಹಿ ಮಾಡಬಾರದೆ? ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಸಮುದಾಯದ ಗೌರವ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಎಚ್.ಕಾಂತರಾಜು ಆಯೋಗದ ಜಾತಿ ಗಣತಿ ವರದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದ್ವಂದ್ವ ನಿಲುವು ತಳೆದಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಟೀಕಿಸಿದ್ದಾರೆ. ವರದಿಯ ಹಸ್ತಪ್ರತಿ/ ಮೂಲಪ್ರತಿಯೇ ಕಳೆದು ಹೋಗಿರುವ ಕಾರಣ ಕಾಂತರಾಜು ವರದಿಯು ಒಂದರ್ಥದಲ್ಲಿ ಆರ್​ಬಿಐ ಗವರ್ನರ್ ರುಜುವಿಲ್ಲದ ನೋಟು ಇದ್ದಂತೆ ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಾಖ್ಯಾನಿಸಿದ್ದಾರೆ.

  ಜಾತಿ ಗಣತಿ ವರದಿಯೇ ಬಂದಿಲ್ಲ. ಆಗಲೇ ವಿರೋಧವೇಕೆ? ವರದಿ ಬಂದ ಮೇಲೆ ನೋಡೋಣ. ವರದಿ ಕೊಡುವವರೆಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಮುಂದುವರೆಸುತ್ತೇವೆ. ಡಿಸೆಂಬರ್​ನಲ್ಲಿ ವರದಿ ಕೊಡುವುದಾಗಿ ಹೇಳಿದ್ದಾರೆ.

  | ಸಿದ್ದರಾಮಯ್ಯ ಮುಖ್ಯಮಂತ್ರಿ

  ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಕೆಲವು ಸಮುದಾಯ, ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂರ್ಪಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ.

  | ಡಿ.ಕೆ.ಶಿವಕುಮಾರ್ ಡಿಸಿಎಂ

  ಮುಖ್ಯಮಂತ್ರಿಗಳೇ ಕಾಲಾವಕಾಶ ನೀಡಿರುವುದರಿಂದ ನಮ್ಮ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಆದಷ್ಟು ಬೇಗ ಪರಿಶೀಲಿಸಿ ಡಿಸೆಂಬರ್ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ.

  | ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಗಳ ಆಯೋಗ

  ಕಾಂತರಾಜು ವರದಿಯ ಮೂಲ ಪ್ರತಿ ಮೊದಲು ಪತ್ತೆ ಹಚ್ಚಲಿ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ನೀಡಲಿ. ವೇದಿಕೆ ಸೃಷ್ಟಿಸಿ ತಜ್ಞರಿಂದ ಸಾಧಕ-ಬಾಧಕ ಪರಾಮರ್ಶೆ, ಸಾರ್ವಜನಿಕರ ಚರ್ಚೆಗೆ ಮೊದಲು ಅವಕಾಶ ಮಾಡಿಕೊಡಲಿ.

  | ವಿ.ಸುನಿಲ್​ಕುಮಾರ್ ಮಾಜಿ ಸಚಿವ

  ಜಾತಿ ಜನಗಣತಿ ವರದಿ ಕೊಡುವ ಮುನ್ನವೇ ಏಕೆ ವಿರೋಧ: ಮುಖ್ಯಮಂತ್ರಿ ಸಿದ್ದರಾಮಯ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts