ಕುರುಬೂರು-ತೊಟ್ಟವಾಡಿ ರಸ್ತೆ ದುಸ್ಥಿತಿ

24story01
Published on

ಭವ್ಯಶ್ರೀ ಚನ್ನಬಸವಣ್ಣ ತಿ. ನರಸೀಪುರ
ತಾಲೂಕಿನ ಮೂಗೂರು ಹೋಬಳಿ ವ್ಯಾಪ್ತಿಯ ಕುರುಬೂರು ಗ್ರಾಮದಿಂದ ಕೊತ್ತೆಗಾಲ ಮಾರ್ಗವಾಗಿ ಸೀಹಳ್ಳಿ, ಕನ್ನಹಳ್ಳಿ, ತೊಟ್ಟವಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ.

ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿ.ನರಸೀಪುರ ಹಾಗೂ ಕೊಳ್ಳೇಗಾಲ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ 8 ರಿಂದ 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು 20 ವರ್ಷಗಳಿಂದ ಡಾಂಬರು ಕಾಣದೆ ವಾಹನ ಸಂಚಾರಕ್ಕೆ ತೊಡಕಾಗಿದೆ.

ಕುರುಬೂರು ಮಾರ್ಗದಿಂದ ಕೊತ್ತೇಗಾಲ, ಸಿಹಳ್ಳಿ, ತೊಟ್ಟವಾಡಿ ಗ್ರಾಮಗಳಿಗೆ ನಿತ್ಯ ನೂರಾರು ಜನರು, ಶಾಲಾ ಮಕ್ಕಳು ಸಂಚರಿಸುತ್ತಾರೆ. ಆದರೆ, ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದ್ದು, ಇದು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅಪಾಯದ ನಡುವೆಯೇ ತೆರಳಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸುತ್ತಿದೆ. ಕುರುಬೂರಿನಿಂದ ತೊಟ್ಟವಾಡಿ, ಕೊಳ್ಳೇಗಾಲ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಎಚ್.ಸಿ.ಮಹದೇವಪ್ಪ ಅವರು ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದಾಗ ಅಭಿವೃದ್ಧಿಪಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಇದುವರೆಗೆ ಸಾಕಾರಗೊಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಕೂಡ ಈ ರಸ್ತೆ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು. ಆದರೆ, ಇದಾವುದೂ ಸಾಕಾರಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ನೂರಾರು ರೈತರು ಈ ರಸ್ತೆಯನ್ನೇ ಅವಲಂಬಿಸಿದ್ದು, ಜಮೀನುಗಳಿಗೆ ಟ್ರಾೃಕ್ಟರ್, ಎತ್ತಿನಗಾಡಿ ಇನ್ನಿತರ ವಾಹನಗಳನ್ನು ತೆಗೆದುಕೊಂಡು ಹೋಗಲು ಪರದಾಡುವಂತಾಗಿದೆ. ಇನ್ನಾದರೂ ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದಾರೆ.

ಕುರುಬೂರು ರಾಷ್ಟ್ರೀಯ ಹೆದ್ದಾರಿಯಿಂದ ಕೊತ್ತೇಗಾಲ ಹಾಗೂ ತೊಟ್ಟವಾಡಿ ಮಾರ್ಗದ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಈ ಬಗ್ಗೆ ಹಲವು ಬಾರಿ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾ.ಪಂ.ನಿಂದ ರಸ್ತೆ ಅಭಿವೃದ್ಧಿಪಡಿಸಲು ಅನುದಾನ ಸಾಕಾಗುವುದಿಲ್ಲ. ಶಾಸಕರು ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು.
ನಾಗವೇಣಿ ಅಧ್ಯಕ್ಷೆ, ಕೊತ್ತೆಗಾಲ ಗ್ರಾ.ಪಂ.

ಸ್ಥಳೀಯ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು ರಸ್ತೆ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಭರವಸೆಗಳನ್ನು ಮಾತ್ರ ನೀಡುತ್ತಾರೆ. ನಂತರ ಯಾವುದೇ ಕೆಲಸ ಕೈಗೊಂಡಿಲ್ಲ. ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು, ರೈತರು ಜಮೀನುಗಳಿಗೆ ತೆರಳಲು, ಕಬ್ಬು ಇನ್ನಿತರ ಸರಕುಗಳನ್ನು ಸಾಹಗಿಸಲು ಕಷ್ಟವಾಗಿದೆ.
ಸಿದ್ದೇಶ್, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ಕುರುಬೂರಿನಿಂದ ತೊಟ್ಟವಾಡಿವರೆಗೆ ರಸ್ತೆ ಅಭಿವೃದ್ಧಿಪಡಿಸಲು ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಶಾಸಕರ ಗಮನಕ್ಕೂ ತರಲಾಗಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.
ಶರತ್ ಚಂದ್ರ, ಲೋಕೋಪಯೋಗಿ ಇಲಾಖೆ ಇಂಜಿನಿಯರ್

ಸರಕು ಸಾಗಣೆಗೆ ಕಷ್ಟ
ಕಬಿನಿ ನಾಲೆಯ ಅಂಚಿನಲ್ಲಿ ರಸ್ತೆ ಇದ್ದು, ಇಲ್ಲಿನ ಜನರು ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಬ್ಬು ಹಾಗೂ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದು, ಪಟ್ಟಣಕ್ಕೆ ಸರಕುಗಳನ್ನು ಸಾಗಿಸುವುದು ಕಷ್ಟಸಾಧ್ಯವಾಗಿದೆ.
ಅಲ್ಲದೆ, ಕಬ್ಬು ಇನ್ನಿತರ ವಸ್ತುಗಳನ್ನು ತುಂಬಿಕೊಂಡು ವಾಹನಗಳು ಈ ರಸ್ತೆಯಲ್ಲಿ ಸಾಗಲು ಸಾಧ್ಯವಾಗದೆ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಕುರುಬೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ ವಿತರಣಾ ನಾಲೆಯಿಂದ ಕನ್ನಳ್ಳಿ ಮೋಳೆ ಛತ್ರಿಯ ಮರದವರೆಗೆ ರಸ್ತೆ ಡಾಂಬರೀಕರಣಗೊಳಿಸಿದರೆ ಸಾರ್ವಜನಿಕರಿಗೆ ಅನೂಕುಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net