

ಮುಂಬೈ: ಅನಿಮಲ್ ಚಿತ್ರದ ಪ್ರಮುಖ ಪಾತ್ರಧಾರಿ ಕುನಾಲ್ ಠಾಕೂರ್ ಜೊತೆ ನೃತ್ಯಗಾರ್ತಿ ಹಾಗೂ ನಟಿ ಮುಕ್ತಿ ಮೋಹನ್ ಹಸೆಮಣೆ ಏರಿದ್ದು, ಈ ನವದಂಪತಿಯ ಮದುವೆಯ ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಟ ಕುನಾಲ್ ಠಾಕೂರ್ ಹಾಗೂ ನಟಿ ಮುಕ್ತಿ ಮೋಹನ್ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ತಿಳಿ ಗುಲಾಬಿ ಬಣ್ಣದ ಮದುವೆ ಧಿರಿಸಿನಲ್ಲಿ ನವ ಜೋಡಿ ಕಣ್ಣು ಕುಕ್ಕುವಂತೆ ಮಿಂಚುತ್ತಿದ್ದಾರೆ.
ಮುಕ್ತಿ ಮೋಹನ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರೆ, ಕುನಾಲ್ ಠಾಕೂರ್ ಅದೇ ಬಣ್ಣದ ಶೆರ್ವಾನಿ ಧರಿಸಿದ್ದಾರೆ. ನಿನ್ನೊಳಗೆ ನನ್ನ ದೈವಿಕ ಸಂಪರ್ಕವನ್ನು ಕಂಡೆ, ನಿನ್ನೊಂದಿಗೆ ನನ್ನ ಸಾಂಗತ್ಯ ಉದ್ದೇಶಿತವಾಗಿದೆ. ದೇವರು, ಕುಟುಂಬ ಹಾಗೂ ಸ್ನೇಹಿತರ ಆಶೀರ್ವಾದಕ್ಕೆ ಋಣಿ. ನಮ್ಮ ಕುಟುಂಬವೂ ಭಾವುಕವಾಗಿದ್ದು, ನಮ್ಮ ಮುಂದಿನ ಜೀವನಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಮುಕ್ತಿ ಮೋಹನ್ ಬರೆದುಕೊಂಡಿದ್ದಾರೆ.
ಮುಕ್ತಿ ಮೋಹನ್ ಸಹೋದರಿ ನೀತಿ ಮೋಹನ್ ಗಾಯಕಿಯಾಗಿದ್ದು, ಮತ್ತೊಬ್ಬ ತಂಗಿ ಶಕ್ತಿ ಸಹ ಮುಕ್ತಿಯಂತೆಯೇ ನಟಿ ಹಾಗೂ ನೃತ್ಯಗಾರ್ತಿಯಾಗಿದ್ದಾರೆ. ಇವರಿಬ್ಬರೂ, ಅಕ್ಕನ ಮದುವೆಯ ಆಲ್ಬಂನಲ್ಲಿ ಮಿಂಚುತ್ತಿರುವುದನ್ನು ಕಾಣಬಹುದು.
ಭಾನುವಾರ ಆಯುಷ್ಮಾನ್ ಖುರಾನ ಅವರ ಪತ್ನಿ ತಾಹಿರ ಕಶ್ಯಪ್ ಅವರು ಮುಕ್ತಿ ಮೋಹನ್ ವಿವಾಹ ಪೂರ್ವ ವಿವಿಧ ಸಂಪ್ರದಾಯಗಳ ವೀಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರಲ್ಲಿ ವಧು ಮುಕ್ತಿ ತನ್ನ ಭಾವಿ ಪತಿ ಕುನಾಲ್ ಠಾಕೂರ್ ಜೊತೆ ಕೇಸರಿಯಾ ತೆರ ಹಾಡಿಗೆ ಹೆಜ್ಜೆ ಹಾಕಿರುವುದು ಸೆರೆ ಆಗಿತ್ತು.
ಈ ಮದುವೆ ವಿಡಿಯೋ ಶೇರ್ ಮಾಡಿದ ತಾಹಿರಾ ನೀವಿಬ್ಬರೂ ನಿನ್ನೆ ರಾತ್ರಿ ಕನಸಿನಲ್ಲಿದ್ದೀರಿ ಎಂದು ಬರೆದುಕೊಂಡಿದ್ದರು. ಇವರ ಮದುವೆ ಫೋಟೋಗಳು ಈಗ ವೈರಲ್ ಆಗಿವೆ.
ಹಾಗೆಯೇ ಮತ್ತೆ ಕೆಲವು ಫೋಟೋಗಳಲ್ಲಿ ಮುಕ್ತಿ ಹಾಗೂ ಕುನಾಲ್ ಸ್ನೇಹಿತರಾದ ತಾಹಿರಾ ಕಶ್ಯಪ್, ಆಕೃತು ಆಹುಜಾ, ಪ್ರೀತಿ ಆನಂದ್ ಜೊತೆ ಪೋಸ್ ನೀಡುವುದು ಸೆರೆ ಆಗಿತ್ತು.
ಮುಕ್ತಿ ಮೋಹನ್ ಅವರು ಝರಾ ನಾಚ್ಕೆ ದಿಖಾ, ನಾಚ್ ಬಲಿಯೆ, ಫಿಯರ್ ಫ್ಯಾಕ್ಟರ್, ಝಲಕ್ ದಿಖ್ಲಾಜ 6, ಮುಂತಾದ ಹಲವು ಫೇಮಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿ ಪಡೆದಿದ್ದಾರೆ. ಇದರ ಜೊತೆಗೆ ಕೆಲ ಸಿನಿಮಾಗಳಲ್ಲಿಯೂ ಅವರು ಕೆಲಸ ಮಾಡಿದ್ದು, ಸಹೀಬ್, ಬಿವಿ ಔರ್ ಗ್ಯಾಂಗ್‌ಸ್ಟಾರ್, ದರುವು, ಹೇಟ್ ಸ್ಟೋರಿ, ಮುರಾನ್ ಮತ್ತು ಕಾಂಚಿ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.