

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿರಾಟ್, ಅನುಷ್ಕಾ ಡಿಸೆಂಬರ್ 11, 2017ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದಹಾಗೆ ವಿರಾಟ್ ಮತ್ತು ಅನುಷ್ಕಾ ಶಾಂಪೂ ಜಾಹೀರಾತಿನ ಸಂದರ್ಭದಲ್ಲಿ ಭೇಟಿಯಾದರು. ಆ ನಂತರ ಅವರ ಲವ್ಸ್ಟೋರಿ ಆರಂಭವಾಯಿತು.
"2013 ರಲ್ಲಿ ಶಾಂಪೂ ಜಾಹೀರಾತಿನ ಸಂದರ್ಭದಲ್ಲಿ ನಾನು ಮತ್ತು ಅನುಷ್ಕಾ ಶರ್ಮಾ ಮೊದಲ ಬಾರಿಗೆ ಭೇಟಿಯಾದೆವು'' ಎಂದು ಸ್ವತಃ ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ದರು. ಮದುವೆಗೂ ಮುನ್ನ ಡೇಟಿಂಗ್ ಮಾಡಿ, 2017ರಲ್ಲಿ ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದರು ವಿರಾಟ್-ಅನುಷ್ಕಾ.
ವಿರಾಟ್ ಕೊಹ್ಲಿ ಆಗಾಗ್ಗೆ ಅನುಷ್ಕಾ ಶರ್ಮಾ ಅವರೊಂದಿಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುವುದನ್ನು ಅವರ ಅಭಿಮಾನಿಗಳು ಕೂಡ ಬಹಳ ಇಷ್ಟಪಡುತ್ತಾರೆ.
ವಿರಾಟ್ ಕೊಹ್ಲಿ ತಮ್ಮ ಸಂದರ್ಶನವೊಂದರಲ್ಲಿ, ಅನುಷ್ಕಾ ಶರ್ಮಾ ಅವರ ಪಾಲಿಗೆ ಬಹಳ ಲಕ್ಕಿ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಅನುಷ್ಕಾ ತನ್ನ ಜೀವನದ ಪ್ರಮುಖ ಸಂದರ್ಭಗಳಲ್ಲಿ ಆಧಾರಸ್ತಂಭವಾಗಿ ನಿಂತಿದ್ದಾಳೆ ಎಂದು ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ ತಮ್ಮ ಹೆಂಡತಿಯೊಂದಿಗೆ ವಿದೇಶಿ ಪ್ರವಾಸದಲ್ಲಿರುವ ವಿರಾಟ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಮೈದಾನಕ್ಕೆ ಮರಳಲಿದ್ದಾರೆ. ಭಾರತ ತಂಡ ಡಿಸೆಂಬರ್ 26 ರಿಂದ ಆಫ್ರಿಕಾ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ಆಡಿದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಕೊಹ್ಲಿ ಭಾರತ ತಂಡದ ಭಾಗವಾಗಿಲ್ಲ.