

ಕುಮಟಾ: ನಾನು, ಯಡಿಯೂರಪ್ಪ ಜತೆ ಕೈ ಜೋಡಿಸದಿದ್ದರೆ ಅವರು ರಾಜಕೀಯವಾಗಿ ಅಂದೇ ಮುಗಿದು ಹೋಗುತ್ತಿದ್ದರು. ಆಗ ಈ ವಿಜಯೇಂದ್ರ ಎಲ್ಲಿದ್ದರು? ಒಂದು ದಿನ ನನ್ನ ಹಾಗೆ ಯಡಿಯೂರಪ್ಪ ಅವರ ಆಪ್ತ ಸಿದ್ದಲಿಂಗಸ್ವಾಮಿ ನನಗೆ ಅಂದು ಚೀಟಿ ತಂದುಕೊಟ್ಟರು. ಅದನ್ನು ಕಳಿಸಿದ್ದವರು ಯಡಿಯೂರಪ್ಪ. ಹೇಗಾದರೂ ಮಾಡಿ ಸರಕಾರ ರಚನೆ ಮಾಡಿ ತಮ್ಮನ್ನು ಮಂತ್ರಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ನಾನು ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ನಾಯಕತ್ವ ಇರಲಿ. ಒಂದು ವೇಳೆ ನೀವು ಪಕ್ಷದಿಂದ ಆಚೆ ಬಂದರೆ ನಿಮ್ಮ ರಾಜಕೀಯ ಜೀವನ ಮುಗಿದು ಹೋಗುತ್ತದೆ ಎಂದು ಕಿವಿಮಾತು ಹೇಳಿದ್ದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ತಮ್ಮ ಹೇಳಿಕೆ ಬಗ್ಗೆ ಬಿಜೆಪಿಯ ಬಿ.ವೈ.ವಿಜಯೇಂದ್ರ ನೀಡಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಈ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ವೀರಶೈವರಿಗೆ ನಾನು ಏನೆಲ್ಲಾ ಒಳ್ಳೆಯದು ಮಾಡಿದ್ದೇನೆ ಎನ್ನುವುದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ. 2006ರಲ್ಲಿ ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ಬರುವುದಕ್ಕೆ ಮುನ್ನ ನಮ್ಮ ತಂದೆಯವರು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ವಿಧಾನಸಭೆ ವಿಸರ್ಜನೆಯ ಯೋಚನೆ ಮಾಡಿದ್ದರು. ಆಗ ಯಡಿಯೂರಪ್ಪ ಅವರ ಜತೆ ಸೇರಿ ಸರ್ಕಾರ ಮಾಡಿದೆವು. ಅಧಿಕಾರದಲ್ಲಿ ಇದ್ದ ವೇಳೆ ಬಿಜೆಪಿಗರನ್ನು ನಾನು ಅತ್ಯಂತ ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು. ಆದರೆ, ಪೇಶ್ವೆ ವಂಶವಾಹಿಗಳು ಅವರನ್ನು ಎಡೆಬಿಡದೆ ಕಾಡಿದರು. ಅವರೇ ಯಡಿಯೂರಪ್ಪ ಸರ್ಕಾರವನ್ನು ತೆಗೆದರು. ಎರಡನೇ ಬಾರಿ ಕಷ್ಟಪಟ್ಟು ಅವರು ಸಿಎಂ ಆದರು. ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ನನಗಿಂತ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ವಂಶಾಡಳಿತ ಕುರಿತು ಮಾತನಾಡಿದ ಅವರು, ವಂಶಾಡಳಿತ ಬಿಜೆಪಿ, ಕಾಂಗ್ರೆಸ್‌ನಲ್ಲಿ ಇಲ್ಲವೇ? ನಮ್ಮ ಕುಟುಂಬದ ಮೇಲೆ ಮಾತ್ರ ಟಾರ್ಗೆಟ್ ಮಾಡಿದ್ದಾರೆ. ಜನರ ಮೇಲೆ ನಮ್ಮ ಕುಟುಂಬದ ಪ್ರೀತಿಯನ್ನ ನೋಡಿ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗೋಕರ್ಣದ ಮಹಾ ಗಣಪತಿಯ ಆಶೀರ್ವಾದ, ಶ್ರೀ ಮಹಾಬಲೇಶ್ವರ ದೇವರ ಪ್ರಸಾದವೂ ನನಗೆ ಸಿಕ್ಕಿದೆ. ಅಲ್ಲದೇ ಬೋಲೋ ಶಂಕರ ದೇವರ ಪ್ರಸಾದ ಕೂಡ ಸಿಕ್ಕಿದೆ. ದೈವಾನುಗ್ರಹ ಜನತಾದಳದ ಮೇಲೆ ಇದೆ. ನಾಡಿನ ಜನತೆಗೆ ದೇವರ ಆಶೀರ್ವಾದ ಇದೆ. ಜೆಡಿಎಸ್ ಅಧಿಕಾರಕ್ಕೆ ಬಂದು ನಾಡಿನ ಜನರ ಕ್ಷೇಮ ಕಾಪಾಡಲಾಗುವುದು ಎಂದು ಭರವಸೆ ನೀಡಿದರು.