

ಬೆಂಗಳೂರು: ಪಾಲಕರು ಇಲ್ಲದೆ ಇದ್ದಾಗ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.
ಮಾವಳಿ ನಿವಾಸಿ ಅಶ್ವಥ್ ರಾಜೇಶ್ ನಾಯಕ್ ಶಿಕ್ಷೆಗೆ ಒಳಗಾದ ಅಪರಾಧಿ. 20 ವರ್ಷ ಕಠಿಣ ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ನ್ಯಾಯಧೀಶರಾದ ಇಷ್ರತ್ ಜಹಾನ್ ಅವರು ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ಮತ್ತು ಅಪರಾಧಿ ದಂಡದ ಮೊತ್ತ 20 ಸಾವಿರ ರೂ. ಅನ್ನು ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.
ಅಪ್ರಾಪ್ತೆ ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದ್ದ ಅಪರಾಧಿ, ರಾತ್ರಿ ಸಮಯದಲ್ಲಿ ಕಾಲ್ ಮಾಡಿ ಮಾತನಾಡುವಂತೆ ಒತ್ತಾಯಿಸುತ್ತಿದ್ದ. 2021ರಲ್ಲಿ ಬೆಳಗ್ಗೆ 7 ಗಂಟೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಅಪರಾಧಿ, ಚಿಲಕ ಹಾಕಿಕೊಂಡಿದ್ದ. ಬಾಲಕಿ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ಅತ್ಯಾಚಾರ ಎಸಗಿದ್ದ. ಅದೇ ವೇಳೆಗೆ ತಾಯಿ ಬಂದಾಗ ಸೆರೆ ಆಗಿದ್ದ. ಅಪ್ರಾಪ್ತ ಬಾಲಕಿ ಕೊಟ್ಟ ದೂರಿನ ಮೇರೆಗೆ ಬಸವನಗುಡಿ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.