

Kulhad Pizza Couple: ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಶೈಲಿಯ ಫಿಜ್ಜಾ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿದ್ದ ಕುಲ್ಹಾದ್ ಪಿಜ್ಜಾ ದಂಪತಿ ಈಗ ಬೆದರಿಕೆ ಕರೆ, ಟ್ರೋಲ್ಗಳ ಹಾವಳಿಗೆ ಬೇಸತ್ತು ಭಾರತವನ್ನೇ ತೊರೆದ ವಿಷಯ ಸದ್ಯ ನೆಟ್ಟಿಗರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ.
ಕುಲ್ಹಾದ್ ಪಿಜ್ಜಾ ದಂಪತಿ ಎಂದೇ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದ ಸೆಹಜ್ ಅರೋರಾ ಮತ್ತು ಗುರುಪ್ರೀತ್ ಕೌರ್ ದಂಪತಿ ಸದ್ಯ ತಮ್ಮ ವಿರುದ್ಧ ವ್ಯಾಪಕ ಟ್ರೋಲ್, ಟೀಕೆಗಳು, ಆರೋಪಗಳಿಂದ ಭಾರತವನ್ನು ತೊರೆದು ಲಂಡನ್ಗೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ನಿರಂತರ ವಿವಾದಗಳು, ಟ್ರೋಲ್ಗಳ ಸುರಿಮಳೆ ಮತ್ತು ಬೆಂಬಿಡದೆ ಕಾಡಿದ ಬೆದರಿಕೆ ಕರೆಗಳು ತಮ್ಮ ವೈಯಕ್ತಿಕ ಜೀವನ ಹಾಗೂ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ ಎಂಬುದನ್ನು ಅರಿತ ವೈರಲ್ ದಂಪತಿಗಳು, ಯಾರ ಗಮನಕ್ಕೂ ಬಾರದಂತೆ ಭಾರತ ತೊರೆದಿದ್ದಾರೆ ಎನ್ನಲಾಗಿದೆ.
ಪಂಜಾಬ್ನ ಜಲಂಧರ್‌ನಲ್ಲಿ ತಮ್ಮ 'ಕುಲ್ಹಾದ್ ಪಿಜ್ಜಾ' ರೆಸಿಪಿ ಮೂಲಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಹಾಗೂ ವೈರಲ್ ಆದ ದಂಪತಿ, ಪಿಜ್ಜಾ ಮುಖಾಂತರವೇ ಅಪಾರ ಸಂಖ್ಯೆಯ ನೆಟ್ಟಿಗರನ್ನು ಸೆಳೆದು, ತಮ್ಮ ಆದಾಯವನ್ನು ಹೆಚ್ಚಿಸಿಕೊಂಡರು. ಆದರೆ, ಮುಂದಿನ ದಿನಗಳಲ್ಲಿ ತಾವು ಮಾಡಿಕೊಂಡ ಸಣ್ಣ ಎಡವಟ್ಟೇ ಇದೀಗ ಅವರು ದೇಶವನ್ನು ತೊರೆಯುವಂತೆ ಮಾಡಿದೆ ಎಂದು ಒಂದಷ್ಟು ವರದಿಗಳು ಒತ್ತಿ ಹೇಳಿವೆ.
ಈ ಹಿಂದೆ ದಂಪತಿಗಳು ಏರ್ ರೈಫಲ್ ಹಿಡಿದಿರುವ ಫೋಟೋವೊಂದನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಅನೇಕರ ಕೆಂಗಣ್ಣಿಗೆ ಗುರಿಯಾಯಿತು. ಇದು ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ ಎಂಬ ಆರೋಪವು ವ್ಯಕ್ತವಾಯಿತು. ಈ ವಿವಾದ ಸೋಷಿಯಲ್ ಮೀಡಿಯಾದಲ್ಲಿ ಅಂತ್ಯ ಕಾಣದೆ ಪೊಲೀಸ್ ಠಾಣೆ ಮೆಟ್ಟಿಲೇರಿ, ವೈರಲ್ ದಂಪತಿಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಿತು. ಅಂತಿಮವಾಗಿ ಈ ಕೇಸ್ನಲ್ಲಿ ದಂಪತಿಗೆ ಜಾಮೀನು ಸಿಕ್ಕಿದ್ದೇ ಆದರೂ ವ್ಯಾಪಕ ಟೀಕೆ, ವ್ಯಂಗ್ಯಗಳಿಂದ ಮುಕ್ತಿ ಸಿಗಲಿಲ್ಲ. ಇದರ ಬೆನ್ನಲ್ಲೇ ದಂಪತಿಗಳ ಖಾಸಗಿ ವೀಡಿಯೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದಾಗ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆರಂಭದಲ್ಲಿ, ಇದು ಅವರಿಬ್ಬರದ್ದೇ ದೃಶ್ಯಗಳು ಎನ್ನಲಾಗಿತ್ತು.
ನಂತರದಲ್ಲಿ ಸತ್ಯಾಸತ್ಯತೆಯನ್ನು ತಿಳಿಸಿದ ದಂಪತಿ, ಇದು ಉದ್ದೇಶಪೂರ್ವಕಾಗಿ ಹೆಸರು ಹಾಳು ಮಾಡಲು ಎಐ ಬಳಿಸಿಕೊಂಡು ರಚಿಸಲಾದ ಎಂದು ಸ್ಪಷ್ಟನೆ ನೀಡಿದರು. ಇಷ್ಟಾದರೂ ಸುಮ್ಮನಾಗದ ಕಿಡಿಗೇಡಿಗಳು, ದಂಪತಿಗಳಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋವನ್ನು ಸೋರಿಕೆ ಮಾಡಿದರು. ಇದು ಅವರ ತಾಳ್ಮೆಯನ್ನು ಪರೀಕ್ಷಿಸಿ, ಕಡೆಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸುವಂತೆ ಮಾಡಿತು. ತನಿಖೆಯ ನಂತರ ಖಾಕಿ, ದಂಪತಿಗಳ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದ ತನೀಶಾ ವರ್ಮಾರನ್ನು ಬಂಧಿಸಲಾಯಿತು.
ನಿಹಾಂಗ್ ಸಿಖ್ಖರಿಂದ ಕುಲ್ಹಾದ್ ಪಿಜ್ಜಾ ದಂಪತಿಗಳು ಬೆದರಿಕೆಯನ್ನು ಎದುರಿಸಿದರು. ಸೆಹಾಜ್ ತಮ್ಮ ಪೇಟವನ್ನು ತೆಗೆದುಹಾಕಬೇಕು ಮತ್ತು ಅವರ ಪತ್ನಿಯೊಂದಿಗಿರುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಿಂದ ಕಿತ್ತು ಬಿಸಾಡಬೇಕು. ಇಂತಹ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಸೋರಿಕೆಯಾದ ವೀಡಿಯೊಗಳು ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದರು. ಈ ಉದ್ವಿಗ್ನತೆಯನ್ನು ನಿಯಂತ್ರಿಸಲು ಪೊಲೀಸರ ಹಸ್ತಕ್ಷೇಪದ ಹೊರತಾಗಿಯೂ, ದಂಪತಿಗಳು ಬೆದರಿಕೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದರು.
ಈ ವಿವಾದಗಳ ಸುರಿಮಳೆಯ ಹಿನ್ನಲೆ ಗುರುಪ್ರೀತ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಯಿತು. ಇದು ಅವರ ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗೊಳಿಸಿತು. ಸೆಹಾಜ್ ಮತ್ತು ಗುರುಪ್ರೀತ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ನಂತರ ವಿಚ್ಛೇದನದ ವದಂತಿಗಳು ಹರಿದಾಡಲು ಶುರುವಾಯಿತು. ಈ ಎಲ್ಲಾ ವಿಷಯಗಳಿಂದ ಬೇಸತ್ತು, ಅವರಿಬ್ಬರು ದಾಂಪತ್ಯ ಜೀವನ ಮುರಿದುಕೊಳ್ಳಲು ಇಚ್ಛಿಸಿದ್ದಾರೆ ಎಂಬ ವದಂತಿಗಳು ಸಿಕ್ಕಾಪಟ್ಟೆ ವೈರಲ್ ಆಗಿ, ಭಾರೀ ಚರ್ಚಗೆ ಗ್ರಾಸವಾಯಿತು. ಸದ್ಯ ಈ ಊಹಾಪೋಹಗಳು ಆಧಾರರಹಿತ ಎಂಬುದು ಇದೀಗ ಸಾಬೀತಾಗಿದ್ದು, ದಂಪತಿಗಳು ಈಗ ತಮ್ಮ ಮಗ ವಾರಿಸ್ ಜತೆಗೆ ಇಂಗ್ಲೆಂಡ್ಗೆ ಹಾರಿದ್ದಾರೆ ಎಂದು ವರದಿ ಹೇಳಿದೆ,(ಏಜೆನ್ಸೀಸ್).