

Sharon raj & Greeshma: ಸ್ಲೋ ಪಾಯಿಸನ್ ಕೊಟ್ಟು ಪ್ರಿಯಕರನನ್ನು ಹಂತ ಹಂತವಾಗಿ ಸಾವಿಗೆ ದೂಡಿದ ಪ್ರೇಯಸಿಗೆ ಕಡೆಗೂ ಮರಣದಂಡನೆ ಶಿಕ್ಷೆ ದೊರಕಿದ್ದೇ ಆದರೂ ಯುವಕನ ಪೋಷಕರ ಕಣ್ಣೀರಿಗೆ ಮಾತ್ರ ಕೊನೆಯೇ ಇಲ್ಲದಂತಾಗಿದೆ. ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಗ್ರೀಷ್ಮಾಳಿಗೆ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡವನ್ನು ಕೋರ್ಟ್ ಸೋಮವಾರ (ಜ.20) ವಿಧಿಸಿತು.
ಪ್ರಕರಣದ ತನಿಖೆ ಎಲ್ಲಿ ಮುಚ್ಚಿಹೋಗುತ್ತೋ? ಮಗನ ಸಾವಿಗೆ ನ್ಯಾಯ ದೊರಕುವುದಿಲ್ಲವೋ ? ಎಂದು ಭಾರೀ ಚಿಂತಾಕ್ರಾಂತರಾಗಿದ್ದ ಪೋಷಕರಿಗೆ ಕಡೆಗೂ ನ್ಯಾಯ ಲಭಿಸಿದೆ. ಒಂದೆಡೆ ಕೋರ್ಟ್ ಅಪರಾಧಿ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದೇ ಆದರೂ ಮಗನನ್ನು ಕಳೆದುಕೊಂಡ ದುಃಖ ಪೋಷಕರನ್ನು ಬೆಂಬಿಡದಂತೆ ಕಾಡುತ್ತಿದೆ. ಅಸಲಿಗೆ ಗ್ರೀಷ್ಮಾ ಶರೋನ್‌ಗೆ ಕುಡಿಸಿದ್ದೇನು? ಇದಕ್ಕಾಗಿ ಆಕೆ ಏನೆಲ್ಲಾ ಮಾಡಿದ್ದಳು ಎಂಬುದನ್ನು ಪೊಲೀಸರು ತನಿಖೆಯಲ್ಲಿ ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ.
ಗ್ರೀಷ್ಮಾಳ ಫೋನ್ ಪರಿಶೀಲಿಸಿದ ಪೊಲೀಸರು, ಆಕೆ ಶರೋನ್ನ ಸಾಯಿಸುವ ಮುನ್ನ ದೊಡ್ಡ ಸಂಶೋಧನೆಯನ್ನೇ ನಡೆಸಿದ್ದಾಳೆ. ಗೂಗಲ್ನಲ್ಲಿ ಕಿರಾತಕಿ ಹುಡುಕಿದ ವಿಷಯಗಳು ಗೂಗಲ್ ಹಿಸ್ಟರಿಯಲ್ಲಿ ಬಯಲಾಗಿದೆ. ಗ್ರೀಷ್ಮಾ ಮೊದಲಿನಿಂದಲೂ ವಿಷ ನೀಡಿ ಕೊಲ್ಲಲು ಪ್ರಯತ್ನಿಸಿದ್ದಾಳೆಯೇ ಹೊರತು ಬೇರೆ ಯಾವ ಮಾರ್ಗವನ್ನು ಪ್ರಯೋಗಿಸಲು ಆಕೆ ಬಯಸಿಲ್ಲ ಎಂಬುದು ಸ್ಪಷ್ಟವಾಗಿದೆ. ವಿಷ ಉಣಿಸುತ್ತಲೇ ನಿಧಾನವಾಗಿ, ಯಾರಿಗೂ ತಿಳಿಯದಂತೆ ಶರೋನ್ನ ಮುಗಿಸುವ ಪ್ಲ್ಯಾನ್ ಗ್ರೀಷ್ಮಾ ಮಾಡಿಕೊಂಡಿದ್ದಳು. ಆರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವ ಮಾತ್ರೆಗಳನ್ನು ಕೊಡಲು ರಿಸರ್ಚ್ ಮಾಡಿರುವುದು ಗೊತ್ತಾಗಿದೆ.
ಎರಡು-ಮೂರು ಮಾತ್ರೆಗಳಿಗಿಂತ ಹೆಚ್ಚಿನ ಸಂಖ್ಯೆಯ ಮಾತ್ರೆಗಳನ್ನು ಪುಡಿಮಾಡಿ, ಮಿಶ್ರಣ ಮಾಡಿ, ಅದನ್ನು ನೀರಿನ ಬಾಟಲಿಯಲ್ಲಿಟ್ಟು, ಶರೋನ್‌ಗೆ ತನ್ನನ್ನು ಭೇಟಿ ಆಗುವಂತೆ ಹೇಳಿದ್ದಳು. ಈ ಸಮಯದಲ್ಲಿ ತಿರುವಾಂಕೂರಿನ ಅರಪ್ಪಳ್ಳಿ ಬಳಿಯ ಅಂಗಡಿಯಿಂದ 2 ಬಾಟಲಿಗಳ ಜ್ಯೂಸ್ ಖರೀದಿಸಿದ ಕಿರಾತಕಿ, ಕಾಲೇಜಿನ ವಾಶ್‌ರೂಮ್‌ಗೆ ಹೋಗಿ ಜ್ಯೂಸ್ ಬಾಟಲಿಗೆ ತಾನು ತಂದ ಮಾತ್ರೆ ಪುಡಿಯನ್ನು ಬೆರೆಸಿ ಶರೋನ್‌ಗೆ ಕೊಟ್ಟಿದ್ದಾಳೆ. ಇದನ್ನು ಕುಡಿದ ಶರೋನ್, ತುಂಬ ಕಹಿಯಿದೆ ಎಂದು ಜ್ಯೂಸ್ ಉಗುಳಿ, ತನಗೆ ಬೇಡೆವೆಂದು ಹೇಳಿದ್ದ. ಇಲ್ಲಿಗೆ ಆಕೆಯ ಮೊದಲ ಪ್ಲ್ಯಾನ್ ವಿಫಲವಾಯಿತು.
ಕಳೆನಾಶಕವನ್ನು ರುಚಿ ನೀಡುವ ರೀತಿ ತಯಾರಿಸಿ, ಅದನ್ನು ಶರೋನ್‌ಗೆ ಕೊಟ್ಟರೆ, ಅವನು ಖಂಡಿತ ಕುಡಿಯುತ್ತಾನೆ ಎಂದು ಗ್ರೀಷ್ಮಾ ಸಂಚು ರೂಪಿಸಿದಳು. ಇದಕ್ಕಾಗಿ, ಗ್ರೀಷ್ಮಾ ತನ್ನ ತಾಯಿ ಪೂವಾರ್‌ನಲ್ಲಿರುವ ಆಯುರ್ವೇದ ಆಸ್ಪತ್ರೆಯಿಂದ ಖರೀದಿಸಿದ ಕಷಾಯವನ್ನು ಬಳಸಿಕೊಂಡಿದ್ದಳು. ಕಷಾಯದ ಪುಡಿಯನ್ನು ಬಿಸಿ ನೀರಿನೊಂದಿಗೆ ಕುದಿಸಿದ ನಂತರ, ಅದರಲ್ಲಿ ಸ್ವಲ್ಪ ತೆಗೆದುಕೊಂಡು, ಕಳೆನಾಶಕದೊಂದಿಗೆ ಬೆರೆಸಿ, ಬಾಟಲಿಯಲ್ಲಿ ಹಾಕಿಟ್ಟುಕೊಂಡಿದ್ದಳು. ಇದನ್ನು ಶರೋನ್ ಮೇಲೆ ಪ್ರಯೋಗಿಸಿದ ಪಾಪಿ ಪ್ರೇಯಸಿ, ಕಡೆಗೂ ತಾನು ಹೂಡಿದ ಕೊಲೆ ಸಂಚಿನಲ್ಲಿ ಗೆದ್ದು, ಪ್ರಿಯರಕನ ಪ್ರಾಣ ಕಸಿದುಕೊಂಡಳು. ಆಕೆಯ ಕೃತ್ಯಕ್ಕೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದೇ ಆದರೂ ಮಗನನ್ನು ಕಳೆದುಕೊಂಡ ಪೋಷಕರು ಇದೀಗ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವುದು ಅತ್ಯಂತ ದುಃಖಕರ ಸಂಗತಿ,(ಏಜೆನ್ಸೀಸ್).
ಕೇರಳದ ತಿರುವನಂತಪುರದಲ್ಲಿ 2022ರ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತನ್ನ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್ ರಾಜ್ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಸಾಬೀತಾಯಿತು.