ರೇಷನ್​ ಕಾರ್ಡ್​ ತಿದ್ದುಪಡಿಗೆ ಕೊನೇ ದಿನ ವದಂತಿ:ಆತಂಕಗೊಂಡ ಪಡಿತರ ಚೀಟಿದಾರರು

Ration Card
Published on

ಬೆಂಗಳೂರು: ರೇಷನ್​ ಕಾರ್ಡ್​ ತಿದ್ದುಪಡಿಗೆ ಜ.31 ಕೊನೆಯ ದಿನಾಂಕದ ವದಂತಿ ಹಿನ್ನೆಲೆಯಲ್ಲಿ "ಬೆಂಗಳೂರು ಒನ್​' ಕೇಂದ್ರ ಮುಂಭಾಗ ಕಾರ್ಡ್​ದಾರರು, ಕಿಮೀ.ವರೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಅಲ್ಲದೆ, ರಾಜಾಜಿನಗರದ ಬೆಂಗಳೂರು ಒನ್​ ಕೇಂದ್ರದಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂಬ ಕಾರಣದಿಂದಲೂ ಜನರು ಮುಗಿಬಿದ್ದಿದ್ದು,ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತಿದ್ದಿಪಡಿಗೆ ಟೋಕನ್​ ಪಡೆಯಲು ಕಾರ್ಡ್​ದಾರರು ಚುಮುಚುಮು ಚಳಿ ನಡುವೆ ಮುಂಜಾನೆ ಎದ್ದು ರಾಜಾಜಿನಗರದ ಬೆಂಗಳೂರು ಒನ್​ ಕೇಂದ್ರ ಮುಂಭಾಗ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಆದರೆ, "ಸರ್ವರ್​ ಡೌನ್​'ದಿಂದ ಕಾರ್ಡ್​ ತಿದ್ದ್ದುಪಡಿಗೆ ಸಾಧ್ಯವಾಗದ ಕಾರಣದಿಂದ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಡ್​ ತಿದ್ದುಪಡಿಗೆ 2024ರ ಡಿಸೆಂಬರ್​ವರೆಗೆ ಇಲಾಖೆ ಅವಕಾಶ ನೀಡಿತ್ತು. ಕಾರ್ಡ್​ದಾರರ ಬೇಡಿಕೆ ಮೇರೆಗೆ ಇಲಾಖೆ, ತಿದ್ದುಪಡಿ ಪ್ರಕ್ರಿಯೆಯನ್ನು ಜ.31ರವರೆಗೆ ವಿಸ್ತರಿಸಿದೆ. ಆದರೆ, ಫೆಬ್ರವರಿಯಲ್ಲಿ ತಿದ್ದುಪಡಿಗೆ ವಿಸ್ತರಣೆಯಾಗಲಿದೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಜನರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಡ್​ದಾರರು ತಮ್ಮ ಕಾರ್ಡ್​ಗಳ ತಿದ್ದುಪಡಿ ಮಾಡಿಸಿಕೊಳ್ಳಲು ಬೆಂಗಳೂರು ಒನ್​ ಕೇಂದ್ರಕ್ಕೆ ಜಮಾಯಿಸುತ್ತಿದ್ದಾರೆ.

ಹೊಸ ಪಡಿತರ ಚೀಟಿ ಕೋರಿ ಬೆಂಗಳೂರು ಒನ್​, ಕರ್ನಾಟಕ ಒನ್​ ಮತ್ತು ಗ್ರಾಮ ಒನ್​ ಕೇಂದ್ರಗಳಲ್ಲಿ ಆನ್​ಲೈನ್​ ಮುಖೇನ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದೆ. ಆದರೆ, ಹೊಸ ಬಿಪಿಎಲ್​, ಎಪಿಎಲ್​ ಕಾರ್ಡ್​ ನೀಡುವುದನ್ನು ಸದ್ಯ ಆಹಾರ ಇಲಾಖೆ ನಿಲ್ಲಿಸಿದೆ. ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾರ್ಡ್​ಗಾಗಿ ಹಿಂದೆ ಸಲ್ಲಿಸಿದ್ದ ಲಕ್ಷಾಂತರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಅನುಮತಿ ಮೇರೆಗೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ,ಇ-ಶ್ರಮ್​ ನೋಂದಾಯಿತ ಕಾರ್ಮಿಕರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಮಾತ್ರ ಹೊಸ ಬಿಪಿಎಲ್​ ಮಂಜೂರು ಮಾಡಲಾಗುತ್ತಿದೆ. ಸರ್ವರ್​ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಲಾಖೆ, ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್​ಐಸಿ)ದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ(ಕೆಎಸ್​ಡಿಸಿ )ಗೆ ಆಹಾರ ತಂತ್ರಾಂಶ ಮೈಗ್ರೇಶನ್​ ಕಾರ್ಯ ನಡೆಯುತ್ತಿದೆ.

ನಿರಂತರ ಪ್ರಕ್ರಿಯೆವೆಂದ ಇಲಾಖೆ:

ಬೆಂಗಳೂರು ಒನ್​, ಕರ್ನಾಟಕ ಒನ್​ ಮತ್ತು ಗ್ರಾಮ ಒನ್​ ಕೇಂದ್ರಗಳಲ್ಲಿ ಕಾರ್ಡ್​ಗಳ ತಿದ್ದುಪಡಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಕಾರ್ಡ್​ದಾರರು ಆತಂಕಪಡಬಾರದು. ಪ್ರತಿ ತಿಂಗಳು 1ರಿಂದ 10ನೇ ತಾರೀಖಿನವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ತಿಂಗಳ ಕೊನೆಯ ವಾರದಲ್ಲೂ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಇಲಾಖೆ ಅಧಿಕಾರಿಗಳು ವದಂತಿ ಕುರಿತು ಸ್ಪಷ್ಟಪಡಿಸಿದ್ದಾರೆ.

ಏನೇನು ತಿದ್ದುಪಡಿಗೆ ಅವಕಾಶ?

* ಬಿಪಿಎಲ್​, ಎಪಿಎಲ್​ ಕಾರ್ಡ್​ನಲ್ಲಿರುವ ಸದಸ್ಯರ ಹೆಸರು ಡಿಲೀಟ್​

* ಹೊಸ ಹೆಸರು ಸೇರ್ಪಡೆ

* ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾರ್ಡ್​ ವಿಳಾಸ ಬದಲಾವಣೆ

* ರೇಷನ್​ ಕಾರ್ಡ್​ಗೆ ಆಧಾರ್​ ಜೋಡಣೆ ( ಇಕೆವೈಸಿ) ಪ್ರಕ್ರಿಯೆ

* ಅಕ್ಕಿ ಪಡೆಯುವ ನ್ಯಾಯಬೆಲೆ ಅಂಗಡಿಗಳ ವಿಳಾಸ ಬದಲಾವಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net