ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ 'ಕುಚುಕು'!

Untitled design (10)
Published on

ಬೆಂಗಳೂರು: ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ನಿರ್ಮಾಣದ, ಮೈಸೂರು ರಾಜು ನಿರ್ದೇಶನದ "ಕುಚುಕು" ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ. ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕ ವಿತರಕ ಎಂ.ಎನ್. ಕುಮಾರ್, ನಿರ್ಮಾಪಕ ಎಂ.ಡಿ. ಪಾರ್ಥಸಾರಥಿ, ಅದಿತಿ(ವಕೀಲರು), ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಶುಭಕೋರಿದರು.

"ನಾನು 26 ವರ್ಷಗಳಿಂದ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹಿಂದೆ "ನೃತ್ಯಂ" ಚಿತ್ರ ನಿರ್ದೇಶಿಸಿದ್ದೆ. ಇದು ನನ್ನ ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ" ಎಂದು ನಾಯಕ ಅರ್ಜುನ್ ಚೋಹಾನ್ ಹೇಳಿದರು.

"ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವನು, ಈಗ ನಾಯಕನಾಗಿದ್ದೇನೆ. ಇದು ನನ್ನ ಮೂರನೇ ಚಿತ್ರವಾಗಿದೆ. ಹೆಸರೇ ತಿಳಿಸುವಂತೆ ಇದೊಂದು ಸ್ನೇಹಿತರ ಕುರಿತಾದ ಚಿತ್ರ, ಇದರಲ್ಲಿ ನಾನೊಬ್ಬ ಒಬ್ಬ ಸ್ನೇಹಿತ" ಎಂದು ಅರ್ಜುನ್ ತಿಳಿಸಿದರು.

"ಈ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ನಾನು ಕೂಡ ಮೈಸೂರಿನವನು. ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದೇನೆ" ಎಂದರು ಖಳನಾಯಕ ಪಾತ್ರಧಾರಿ ನಟ ಶೈಕ್ ಶಿವಾಜಿ ಹೇಳಿದರು. ಸಿನಿಮಾ ಮೇಲಿನ ಪ್ರೀತಿಯಿಂದ ಕಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕಿ ನಾಗರತ್ನಮ್ಮ ತಿಳಿಸಿದರು.

ಅರ್ಜುನ್ ಚೋಹಾನ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವಥ್, ಬಲ ರಾಜ್ವಾಡಿ, ಶೈಕ್ ಶಿವಾಜಿ, ಹನುಮಂತೇ ಗೌಡ, ಬಿ.ಡಿ.ಜತ್ತಿ ಮುಂತಾದವರ ತಾರಾಗಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net