

ಕುಣಿಗಲ್: ಕೆಎಸ್ಆರ್ಟಿಸಿ ಬಸ್ನ ಹಿಂಬದಿ ಟೈರ್ ಸ್ಪೋಟಗೊಂಡು ಇಬ್ಬರು ವ್ಯಕ್ತಿಗಳು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಶಿವಪುರ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ. ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಾವರೆಕೆರೆಯಿಂದ ಇಪ್ಪಾಡಿ ಮಾರ್ಗವಾಗಿ ಕುಣಿಗಲ್ಗೆ ತೆರಳುತ್ತಿದ್ದ ಸರ್ಕಾರಿ ಬಸ್ನ ಟೈರ್ ಸ್ಫೋಟಗೊಂಡು ಶಿವಪುರ ಗ್ರಾಮದ ಬಳಿ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಿಂಬದಿ ಚಕ್ರದ ಮೇಲ್ಭಾಗದ ಸೀಟ್ನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರ ಕಾಲು ಮುರಿದಿದೆ.
ಬಸ್ನ ಟೈರ್ ಹಳೆಯದಾಗಿದ್ದು ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ಸಿನಲ್ಲಿ ಶಾಲೆ-ಕಾಲೇಜಿಗೆ ತೆರಳುತ್ತಿದ್ದ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಭಾರೀ ಅವಗಢ ತಪ್ಪಿದೆ.
ಕುಣಿಗಲ್ನಿಂದ ಇಪ್ಪಾಡಿ ಮಾರ್ಗವಾಗಿ ತಾವರೆಕೆರೆ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಗಳಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಒಂದೇ ಬಸ್ಸಿನಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.