

ಕಲಬುರಗಿ: ರಾಜ್ಯದಲ್ಲಿ ನಿನ್ನೆ ಹಾಗೂ ಇಂದು ಎರಡು ಭೀಕರ ಅಪಘಾತಗಳು ಸಂಭವಿಸಿದ್ದು, ಇದೀಗ ಇನ್ನೊಂದು ಅಪಘಾತ ಸಂಭವಿಸಿದೆ. ನಲವತ್ಮೂರು ಜನರಿದ್ದ ಬಸ್ಸೊಂದು ಇಂದು ಪಲ್ಟಿಯಾಗಿದೆ.
ನಿನ್ನೆ ಕೊಪ್ಪಳ ಬಳಿ ಲಾರಿ ಮತ್ತು ಇಂಡಿಕಾ ಕಾರು ಮಧ್ಯೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಆರೂ ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಇಂದು ಕೊಳ್ಳೇಗಾಲದ ಟಿ.ನರಸೀಪುರ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ಕುಟುಂಬಗಳ ಒಟ್ಟು 9 ಮಂದಿ ಸಾವಿಗೀಡಾಗಿದ್ದರು.
ಇದೀಗ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿದೆ. ಬೀದರ್ನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಈ ಬಸ್ನಲ್ಲಿ 40ಕ್ಕೂ ಅಧಿಕ ಮಂದಿ ಇದ್ದರು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿದಲ್ಲ ಎನ್ನಲಾಗಿದೆ. ಲಾರಿಯೊಂದು ಏಕಾಏಕಿ ಎದುರಿಗೆ ಬಂದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.