ಕೆಎಸ್‌ಒಯು ಬಹುಕೋಟಿ ಹಗರಣ ಕೊನೆಗೂ ಸಿಬಿಐ ಅಂಗಳಕ್ಕೆ

KSOU
Published on

ಬೆಂಗಳೂರು: ದಶಕದಿಂದ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಬಹುಕೋಟಿ ಹಗರಣದ ತನಿಖೆ ಕೊನೆಗೂ ಸಿಬಿಐ ಅಂಗಳಕ್ಕೆ ತಲುಪಿದೆ.

ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕದಲ್ಲಿ 300 ಕೋಟಿ ರೂ. ಅನ್ನು ಕೆಎಸ್‌ಒಯು ದುರ್ಬಳಕ್ಕೆ ಮಾಡಿಕೊಂಡಿರುವ ಬಗ್ಗೆ ದಶಕಗಳ ಹಿಂದೆಯೇ ಆರೋಪ ಕೇಳಿಬಂದಿತ್ತು. ರಾಜ್ಯ ಸರ್ಕಾರ, ಹಗರಣದ ತನಿಖೆ ನಡೆಸುವಂತೆ ಸಿಬಿಐಗೆ ಸೆ.18ರಂದು ಪತ್ರ ಬರೆದಿತ್ತು. ಇದರ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು, ಕೆಎಸ್‌ಒಯು ಮತ್ತು ಇತರರ ವಿರುದ್ಧ ಬುಧವಾರ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇಶ, ವಿದೇಶಗಳ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಕೆಎಸ್‌ಒಯು ಶಾಖೆ ತೆರೆದು ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ವಿದ್ಯಾರ್ಥಿಗಳು ಪ್ರವೇಶ ಮತ್ತು ಪರೀಕ್ಷೆ ಶುಲ್ಕವನ್ನು ನೇರ ಜಮೆ ಮಾಡುತ್ತಿದ್ದರು. ಅಲ್ಲದೆ, ಅಂಗಸಂಸ್ಥೆಗಳು ಕೂಡ ಕೆಎಸ್‌ಒಯುಗೆ ಶುಲ್ಕ ಜಮೆ ಮಾಡುತ್ತಿದ್ದವು. ಇದರಿಂದ ಕೋಟ್ಯಂತರ ರೂ. ಸಂಗ್ರಹವಾಗುತ್ತಿತ್ತು.

2013-14 ಮತ್ತು 2014-15ನೇ ಹಣಕಾಸು ವರ್ಷದಲ್ಲಿ ಲೆಕ್ಕಪರಿಶೋಧನೆ ನಡೆದಾಗ ವಿವಿಧ ಅಂಗ ಸಂಸ್ಥೆಗಳಿಂದ 50 ಕೋಟಿ ರೂ. ನಾಪತ್ತೆ ಆಗಿರುವುದು ಬೆಳಕಿಗೆ ಬಂದಿತ್ತು. ವಿದ್ಯಾರ್ಥಿಗಳಿಂದ ಪಡೆದ ಪ್ರವೇಶ ಶುಲ್ಕವನ್ನು ಪರಿಶೀಲನೆ ನಡೆಸಿದಾಗ 2009-10ರಿಂದ 2012-13ರ ಆರ್ಥಿಕ ವರ್ಷದಲ್ಲಿ ಅಂದಾಜು 250 ಕೋಟಿ ರೂ. ಲೆಕ್ಕಕ್ಕೆ ಸಿಕ್ಕಿರಲಿಲ್ಲ. ಪರೀಕ್ಷೆ ಶುಲ್ಕ, ಅಧ್ಯಯನ ಕೇಂದ್ರ, ಅಂಕಪಟ್ಟಿ ವಿಭಾಗಗಳ ರಸೀದಿಗಳಲ್ಲಿ ನಿಧಿ ದುರ್ಬಳಕೆ ಮಾಡಿಕೊಂಡಿರುವುದು ಲೆಕ್ಕಪರಿಶೋಧಕರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕೆಎಸ್‌ಒಯು ಆಡಳಿತ ಮಂಡಳಿ ಅಕ್ರಮ ಎಸಗಿರುವ ಹಗರಣ ದೇಶಾದ್ಯಂತ ವ್ಯಾಪಿಸಿರುವ ಕಾರಣ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಲಾಗಿತ್ತು.

ಪ್ರಕರಣ ರಾಜ್ಯಪಾಲರ ಅಂಗಳ ತಲುಪಿದರೂ ಆಗಿನ ಸರ್ಕಾರಗಳು ಕಾಲ ಮುಂದೂಡಿಕೊಂಡು ಬಂದಿದ್ದವು. ಇದೀಗ ರಾಜ್ಯ ಸರ್ಕಾರ ತನಿಖೆಗೆ ಶಿಾರಸು ಮಾಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net