

ಮಂಗಳೂರು: ಮೈಕ್‌ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಮೈಕ್ ಇಲ್ಲದೆ ಕೂಗಿದರೆ ಆಜಾನ್ ಕೇಳುವುದಿಲ್ಲವೇ? ಅಲ್ಲಾನೇನು ಕಿವುಡನೇ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಮಂಗಳೂರಿನ ಕಾವೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ವಿವಾದಾತ್ಮಕ ನಾಲಗೆ ಹರಿಯಬಿಟ್ಟ ಈಶ್ವರಪ್ಪ ಮುಸ್ಲಿಮರ ಆಜಾನ್ ಕರೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಈಶ್ವರಪ್ಪ ಅವರ ಮಾತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಈಶ್ವರಪ್ಪ ಭಾಷಣ ಆರಂಭಿಸುತ್ತಿದ್ದಂತೆ ಪಕ್ಕದ ಮಸೀದಿಯಲ್ಲಿ ಆಜಾನ್ ಕೇಳಿಸಿದೆ. ಈ ವೇಳೆ ನಾನು ಎಲ್ಲಿ ಹೋದ್ರು ಇದೊಂದು ತಲೆನೋವು. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಕಡಿವಾಣ ಬೀಳಲಿದೆ. ಸುಪ್ರೀಂಕೋರ್ಟ್ ಆದೇಶವಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇತ್ಯರ್ಥವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯ ಅವರು ಎಲ್ಲಾ ಧರ್ಮಗಳಿಗೆ ಗೌರವ ಕೊಡಬೇಕೆಂದು ಹೇಳುತ್ತಾರೆ ಎಂದು ಈಶ್ವರಪ್ಪ ಹೇಳಿದರು.