

ಬೆಂಗಳೂರು/ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ‘ನಾನು ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಬುಧವಾರ ಹೇಳಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ನಿಲುವಿನಿಂದ ಹಿಂದೆ ಸರಿದು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತಪ್ಪಿಸಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಹಿತ ಪಕ್ಷದ ವರಿಷ್ಠರ ಸೂಚನೆಯೇ ಅವರ ಈ ನಡೆಗೆ ಕಾರಣವೆನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಬಿಜೆಪಿ ಸರ್ಕಾರದ 2ನೇ ವಿಕೆಟ್ ಪತನವಾದಂತಾಗಿದೆ.
ದೆಹಲಿ ಸಂದೇಶ: ಪಕ್ಷದ ಕೆಲವು ಮುಖಂಡರೇ ಈಶ್ವರಪ್ಪ ರಾಜೀನಾಮೆ ನೀಡದಂತೆ ತಡೆದಿದ್ದರು, ಅದೇ ಗುಂಪಿನ ಕೆಲವರು ಬಲವಾಗಿ ಸಮರ್ಥನೆ ಕೂಡ ಮಾಡಿಕೊಳ್ಳುತ್ತಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಹೈಕಮಾಂಡ್ನ ಮೊರೆ ಹೋಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಸಹ ಪ್ರಧಾನಿ ನರೇಂದ್ರ ಮೋದಿ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದು ರಾಜ್ಯ ಮುಖಂಡರಿಗೆ ತಿಳಿಸಿದ್ದರು. ಕೆಲವೊಂದು ಪ್ರಕರಣದಲ್ಲಿ ಒಂದೇ ದಿನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸಲು ಸಾಧ್ಯವೇ ಇಲ್ಲವೆಂಬ ಸಂದೇಶವನ್ನು ಮೋದಿ ನೀಡಿದ್ದರಿಂದ ಅಂತಿಮವಾಗಿ ಈಶ್ವರಪ್ಪ ರಾಜೀನಾಮೆ ಪ್ರಕಟಿಸಿದರೆಂದು ಮೂಲಗಳು ಖಚಿತಪಡಿಸಿವೆ.
ಸಿಐಡಿಗೆ ವಹಿಸಲು ಉತ್ಸುಕ: ಸಚಿವ ಈಶ್ವರಪ್ಪ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ಉಡುಪಿ ಪೊಲೀಸರು ಬೆಂಗಳೂರಿನ ಜನಪತ್ರಿನಿಧಿಗಳ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ಬಗ್ಗೆ ಈಗಾಗಲೇ ಸಿಎಂ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.
ಷಡ್ಯಂತ್ರ ಬಯಲಾಗಲಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಷಡ್ಯಂತ್ರ ಬಯಲಾಗಬೇಕು. ಈ ಸಂಚು ರೂಪಿಸಿದವರಿಗೆ ಶಿಕ್ಷೆಯಾಗಬೇಕು. ಯಾವ ರೀತಿಯ ತನಿಖೆ ಮಾಡಿ ಸಬೇಕು ಎಂಬುದನ್ನು ಸಿಎಂ ವಿವೇಚನೆಗೆ ಬಿಡುತ್ತೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಗುರುವಾರ ರಾಜೀನಾಮೆ ನಿರ್ಧಾರ ಘೋಷಣೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂತೋಷ ಪಾಟೀಲ್ ಷಡ್ಯಂತ್ರಕ್ಕೆ ಬಲಿಯಾದನೋ, ಆಕಸ್ಮಿಕವಾಗಿ ಆತ್ಮಹತ್ಯೆ ಮಾಡಿಕೊಂಡನೋ? ನನಗೆ ಗೊತ್ತಿಲ್ಲ. ಆದರೆ ಆತ್ಮಹತ್ಯೆಯ ಹಿಂದೆ ನಡೆದಿರುವ ಷಡ್ಯಂತ್ರ ಬಯಲಿಗೆ ಬರಬೇಕು ಎಂದು ಹೇಳಿದರು. ಈ ಪ್ರಕರಣದಲ್ಲಿ ನಾನು ಬಲಿಪಶು ಅಲ್ಲ. ಪ್ರಕರಣದ ಸಮಗ್ರ ತನಿಖೆ ಆಗಬೇಕು. ಆಗ ಮಾತ್ರ ಸತ್ಯಾಂಶ ಹೊರಬರಲಿದೆ. ಆತ್ಮಹತ್ಯೆ ಹಿಂದೆ ಯಾರಿದ್ದಾರೆ ಎಂದು ತಿಳಿಯುತ್ತದೆ. ಹಾಗಾಗಿ ಈ ಪ್ರಕರಣದಲ್ಲಿ ನಿದೋಷಿಯಾಗಿ ಹೊರಬರುವ ಸಂಪೂರ್ಣ ವಿಶ್ವಾಸ ನನಗಿದೆ. ಈ ಪ್ರಕರಣದಲ್ಲಿ ನಾನು ಬಲಿಪಶು ಅಲ್ಲ. ಕೇವಲ ಶೇ. 1 ನನ್ನ ತಪ್ಪು ಇದ್ದರೂ ನನಗೆ ಶಿಕ್ಷೆಯಾಗಲಿ. ಚೌಡೇಶ್ವರಿ ನನ್ನ ಮನೆ ದೇವರು. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ನೀಡಲಿ ಎಂದು ಹೇಳಿದರು.
ನಿಲ್ಲದ ಕೈ ಹೋರಾಟ: ಈಶ್ವರಪ್ಪ ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್ ತನ್ನ ಹೋರಾಟವನ್ನೇನು ನಿಲ್ಲಿಸಲು ಸಿದ್ಧವಿಲ್ಲ. ಈಶ್ವರಪ್ಪ ಅವರನ್ನು ಬಂಧಿಸಬೇಕು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿ ಹೋರಾಟ ಮುಂದುವರಿಸಲು ನಿರ್ಧರಿಸಿದೆ.
ಸಂತೋಷ್ ಅಂತ್ಯಕ್ರಿಯೆ: ಗುತ್ತಿಗೆದಾರ ಸಂತೋಷ್ ಅಂತ್ಯಕ್ರಿಯೆ ಗುರುವಾರ ಬೆಳಗಾವಿ ಜಿಲ್ಲೆಯ ಬಡಸ್ ಕೆ.ಎಸ್. ಗ್ರಾಮದಲ್ಲಿ ಗಲಾಟೆ, ಗದ್ದಲದ ನಡುವೆ ನಡೆಯಿತು. ಈ ವೇಳೆ, ಮೃತನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿ ಸಂತೋಷ್ ಶವ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಆಕ್ಷೇಪಿಸಿದ ಸಂತೋಷ್ ಮಾವ, ‘ಸಾವಿನ ಮನೆಯಲ್ಲಿ ರಾಜ ಕೀಯ ಮಾಡಬೇಡಿ. ಮೊದಲು ಅಂತ್ಯಕ್ರಿಯೆ ಮಾಡೋಣ. ಬಳಿಕ ಹೋರಾಟ ಮಾಡೋಣ’ ಎಂದು ಹೇಳಿದರು.
ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು, ರಾಜೀ ನಾಮೆ ನೀಡಿದ್ದಾರೆ. ‘ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಹಾಗೂ ತಪ್ಪಿಲ್ಲ ಎನ್ನುವ ಸಂಪೂರ್ಣ ವಿಶ್ವಾಸವಿದೆ. ಹೀಗಾಗಿ ನನಗೆ ನೈತಿಕತೆ ಇದೆ. ಈಗ ಅದನ್ನಿಟ್ಟುಕೊಂಡು ಮಾತನಾಡಿದರೆ ಬಹಳಷ್ಟು ಜನರಿಗೆ ಇರಿಸುಮುರುಸಾಗುತ್ತದೆ. ಅದಾಗುವುದು ಬೇಡ. ಇದರ ತನಿಖೆ ಮುಗಿಸಿ, ಸತ್ಯ ಹೊರಬಂದು ನನ್ನ ಮೇಲೆ ಇರುವ ಆರೋಪಗಳಿಂದ ವಿಮುಕ್ತನಾಗಿ ಹೊರಬರುತ್ತೇನೆ. ಅಲ್ಲಿಯವರೆಗೂ ಈ ಸ್ಥಾನದಲ್ಲಿರಲು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಶುಕ್ರವಾರ ಸಂಜೆ ಅವರನ್ನು ಭೇಟಿಯಾಗಲಿದ್ದೇನೆ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ‘ಗುತ್ತಿಗೆದಾರ ಸಂತೋಷ್ ಸಾವಿನ ಹಿಂದೆ ಅನೇಕ ಅನುಮಾನಗಳು ಮನೆಮಾಡಿದ್ದು, ಸೂಕ್ತ ತನಿಖೆ ನಡೆಸುವ ಮೂಲಕ ಜನರ ಮುಂದೆ ಸತ್ಯವನ್ನು ತೆರೆದಿಡಬೇಕು. ಇಂತಹ ಪರಿಸ್ಥಿತಿಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡುವುದು ಸೂಕ್ತ’ ಎಂದು ಸೂಚ್ಯವಾಗಿ ಹೇಳಿದ್ದರು.
ಇಕ್ಕಟ್ಟಿಗೆ ಸಿಲುಕಿದ್ದ ಬಿಜೆಪಿ: ಈಶ್ವರಪ್ಪ ವಿಚಾರದಲ್ಲಿ ಬಿಜೆಪಿ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿತ್ತು. ರಾಜೀನಾಮೆ ಪಡೆದರೆ ಒಂದು ರೀತಿ, ಇಲ್ಲದಿದ್ದರೆ ಇನ್ನೊಂದು ರೀತಿಯ ಆರೋಪ ಎದುರಿಸಬೇಕಾದ ಸ್ಥಿತಿ ಇತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದು ಟೀಕಿಸಿದ್ದರು. ಇದೀಗ ಈಶ್ವರಪ್ಪ ಪ್ರಕರಣ ಹಾಗೂ ಗುತ್ತಿಗೆದಾರರ ಸಂಘದ ಪ್ರತ್ಯೇಕ ದೂರುಗಳಲ್ಲಿ 40 ಪರ್ಸೆಂಟ್ ಎಂಬ ಆರೋಪದ ದೂರು ಪ್ರಧಾನಿಗೆ ತಲುಪಿತ್ತು. ರಾಜೀನಾಮೆ ಪಡೆದರೆ ಪರ್ಸೆಂಟೇಜ್ ಒಪ್ಪಿಕೊಂಡಂತೆ ಆಗುತ್ತದೆ ಎಂಬ ಭಯ ಒಂದೆಡೆ ಇದ್ದರೆ, ಪಡೆಯದಿದ್ದರೆ ಭ್ರಷ್ಟಾಚಾರಕ್ಕೆ ಬೆಂಬಲ ಇದೆ ಎಂಬ ಆರೋಪಕ್ಕೆ ಒಳಗಾಗಬೇಕಾಗುತ್ತದೆ ಎಂಬ ಭಯ ಬಿಜೆಪಿ ಹೈಕಮಾಂಡ್ಗಿತ್ತು. ಕಾಂಗ್ರೆಸ್ಗೆ ಹೋರಾಟದ ಅಸ್ತ್ರ ಸಿಕ್ಕುವುದನ್ನು ತಪ್ಪಿಸಿಕೊಳ್ಳಬೇಕಾಗಿತ್ತು. ರಾಹುಲ್ ಗಾಂಧಿ ಮಾಡಿದ ಟ್ವೀಟ್ ಬಿಜೆಪಿ ವರಿಷ್ಠರನ್ನು ತಕ್ಷಣ ಕ್ರಮ ಕೈಗೊಳ್ಳುವ ಅನಿವಾರ್ಯತೆಗೆ ಸಿಕ್ಕಿಸಿತ್ತು. ಕೊನೆಗೆ ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎಂಬ ನಿಲುವಿಗೆ ಬಂದು ಈಶ್ವರಪ್ಪ ಅವರಿಂದಲೇ ರಾಜೀನಾಮೆಯ ಮಾತು ಹೇಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕಾರ್ಯಕಾರಿಣಿ ಗರ: ಹೊಸಪೇಟೆಯಲ್ಲಿ ಏ.16 ಮತ್ತು 17 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಉತ್ಸಾಹದಿಂದ ಸಿದ್ಧವಾಗುವ ತಯಾರಿಯಲ್ಲಿದ್ದ ಕಾರ್ಯಕಾರಿಣಿಗೆ ಈ ಪ್ರಕರಣದಿಂದ ಗರ ಬಡಿದಂತೆ ಅಗಿದೆ. ಸರ್ಕಾರದ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ಮುಕ್ತವಾಗುವ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಸಬೇಕಾದ ಅನಿವಾರ್ಯತೆ ಮೂಡಿದೆ.