

ಬಳ್ಳಾರಿ: ಐದು ವರ್ಷಗಳ ಅವಧಿಯವರೆಗೂ ನಾನೇ ಸಿಎಂ ಆಗಿ ಇರುತ್ತೇನೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ನಾಯಕರಲ್ಲಿ ನಾನು ಮುಖ್ಯಮಂತ್ರಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ನಲ್ಲಿ ಎಲ್ಲರೂ ಮುಖ್ಯಮಂತ್ರಿಯಾಗುವವರೇ? ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಈಶ್ವರಪ್ಪ, 'ಕೈ'ನಲ್ಲಿ ಎಲ್ಲರೂ ಮುಖ್ಯಮಂತ್ರಿಯಾಗುವವರೇ? ನಾನು ಸಿಎಂ, ನಾನು ಸಿಎಂ ಎಂದು 224 ಜನರು ಹೇಳ್ತಿದ್ದಾರೆ. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಖರ್ಗೆ ಕೂಡ ನಾನು ಸಿಎಂ ಎಂದು ಹೇಳುತ್ತಾರೆ. ಇನ್ನೂ ಅವರ ತಂದೆಯ ಹೆಸರು ಹೇಳಿದ್ರೇ ಒಪ್ಪಿಕೊಳ್ಳುತ್ತಿದ್ದೆ, ಆದ್ರೆ ನಾನೇ ಸಿಎಂ ಅಂತಾರೆ ಅವರ ಮಗ ಪ್ರಿಯಾಂಕ್ ಖರ್ಗೆ ಎಂದರು.
"ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಆಗಲು ಬಿಟ್ಟಿಲ್ಲ. ಇನ್ನೂ ಇವರನ್ನು ಬಿಡ್ತಾರಾ? ಸತೀಶ್ ಜಾರಕಿಹೊಳಿ ಕೂಡ ಸಿಎಂ ರೇಸ್ ನಲ್ಲಿದ್ದಾರೆ ಎನ್ನುತ್ತಾರೆ. ಇನ್ನೂ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಲಿ ಎಂದು ರಾಜಣ್ಣ ಹೇಳಿದ್ದಾರೆ. ಪರಮೇಶ್ವರ್ ದೇವರು ಅನುಗ್ರಹ ಇದ್ದರೆ ಸಿಎಂ ಆಗುತ್ತೇನೆ ಎನ್ನುತ್ತಾರೆ. ದೇವರನ್ನು ಬೈಯೋ ಕಾಂಗ್ರೆಸ್ನವರು ಇದೀಗ ದೇವರು, ದೇವರು ಎಂದು ಹೇಳುತ್ತಾರೆ" ಎಂದರು.
"ಸಿದ್ದರಾಮಯ್ಯ ಇಂದು ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ನಂತರದಲ್ಲಿ ಉಲ್ಟಾ ಹೊಡೆಯುತ್ತಾರೆ. ಅದೇನು ನಮ್ಮಪ್ಪನ ಆಸ್ತಿನಾ, ನಮ್ಮಪ್ಪ ಗೂಟ ಹೊಡೆದುಕೊಂಡು ಕೂರಲು? ಕೇಂದ್ರದ ಒಂದು ಪಾರ್ಟಿಯಿದೆ, ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಆಯಿತು" ಎಂದು ಈಶ್ವರಪ್ಪ ಹೇಳಿದರು.