ಹಳ್ಳಿಕಾರ್ ಹೋರಿ ಬೆಲೆ ಕೋಟಿ ರೂಪಾಯಿ!; ಕೃಷಿ ಮೇಳಕ್ಕೆ ಚಾಲನೆ, 20 ಕೃಷಿ ತಂತ್ರಜ್ಞಾನ ಲೋಕಾರ್ಪಣೆ

Hotha
Published on

ಬೆಂಗಳೂರು: ಕೋಟಿ ರೂ.ಗೆ ಮಾರಾಟ ಮಾಡುವುದಾಗಿ 7 ಅಡಿ ಎತ್ತರಕ್ಕೆ ಬೆಳೆಸಿದ ಹಳ್ಳಿಕಾರ್ ಹೋರಿ, 7 ಲಕ್ಷ ರೂ. ಮೌಲ್ಯದ ಬೋಯರ್ ಆಫ್ರಿಕಲ್ ತಳಿಯ ಹೋತ, ಹನ್ನೊಂದು ಅಡಿಗಿಂತ ಎತ್ತರವಾಗಿ ಬೆಳೆದಿದ್ದ ಕಬ್ಬು, ಎದೆಯೆತ್ತರಕ್ಕೆ ಬೆಳೆದಿದ್ದ ರಾಗಿ ಇವು ಈ ವರ್ಷದ ಕೃಷಿ ಮೇಳದ ಪ್ರಮುಖ ಆಕರ್ಷಣೆಗಳು.

ದಕ್ಷಿಣ ಕರ್ನಾಟಕದಲ್ಲಿ ಕೃಷಿ ಸಂಬಂಧಿತ ಸಂಶೋಧನೆ, ತಾಂತ್ರಿಕತೆ ಅಳವಡಿಕೆ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕ ವೇದಿಕೆ ಕಲ್ಪಿಸಿಕೊಡುವ 4 ದಿನದ ಕೃಷಿ ಮೇಳ -2021ರ ಕೃಷಿ ಮೇಳವನ್ನು ಎಚ್​ಡಿ ಕೋಟೆಯ ಆದಿವಾಸಿ ಹಾಡಿಯ ರೈತ ಮಹಿಳೆ ಪ್ರೇಮಾ ದಾಸಪ್ಪ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಬೆಂಗಳೂರು ಕೃಷಿ ವಿವಿ ಜಿಕೆವಿಕೆ ಆರವಣದಲ್ಲಿ ಗುರುವಾರ ಆರಂಭಗೊಂಡ ಕೃಷಿ ಮೇಳದಲ್ಲಿ ಒಟ್ಟು 7 ಏಕದಳ ಕೃಷಿ ಧಾನ್ಯಗಳಾದ (ಭತ್ತ, ರಾಗಿ-2, ನವಣೆ, ಸಾಮೆ, ಬರಗು) ಕಬ್ಬು, ಹಲಸು ಹಾಗೂ ಬೀಜದ ದಂಟು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ ಲೋಕಾರ್ಪಣೆ ಮಾಡಲಾಯಿತು.

65 ಲಕ್ಷ ರೂ. ಹಳ್ಳಿಕಾರ್ ಹೋರಿ: ಈ ವರ್ಷದ ಪ್ರಮುಖ ಆಕರ್ಷಣೆ 65 ಲಕ್ಷ ರೂ.ಗಿಂತ ಅಧಿಕ ಬೆಲೆಯ ದೇಸಿ ತಳಿಯ ಹಳ್ಳಿಕಾರ್ ಹೋರಿ ಪ್ರದರ್ಶನವಾಗಿತ್ತು. ಸುಮಾರು 7 ಅಡಿಗಿಂತ ಹೆಚ್ಚು ಎತ್ತರದ 3.5 ವರ್ಷದ ಕೃಷ್ಣ ಎಂಬ ಹೋರಿಯನ್ನು ಮಾಲೀಕರು ಪ್ರದರ್ಶನಕ್ಕೆ ಇಟ್ಟಿದ್ದು, 1 ಕೋಟಿ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಬೋಯರ್ ಆಫ್ರಿಕನ್ ತಳಿ ಹೋತವು 1 ವರ್ಷ ಸಾಕಿದರೆ ಸುಮಾರು 4 ಲಕ್ಷ ರೂ. ಬೆಲೆ ಬಾಳುತ್ತದೆ ಎಂದು ಮಾಲೀಕರು ತಿಳಿಸಿದ್ದಾರೆ.

ಇದೇ ವೇಳೆ ಕೃಷಿ ವಿಶ್ವವಿದ್ಯಾಲಯದಡಿ ಬರುವ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡು ಒಟ್ಟು 10 ಜಿಲ್ಲೆಗಳ 140 ಕೃಷಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

10 ಹೊಸ ತಳಿಗಳ ಅಭಿವೃದ್ಧಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ 10 ಹೊಸ ತಳಿಗಳ ಪ್ರಾತ್ಯಕ್ಷಿಕೆಯನ್ನು ರೈತರು ಕೃಷಿ ಮೇಳದಲ್ಲಿ ವೀಕ್ಷಿಸಬಹುದು. ಭತ್ತ (ಕೆಎಂಪಿ-220 ಮತ್ತು ಎಂಎಸ್​ಎನ್-99), ರಾಗಿ (ಕೆಎಂಆರ್-316), ನವಣೆ (ಜಿಪಿಯುಎಫ್-3), ಸಾಮೆ (ಜಿಪಿಯುಎಲ್-6), ಬರಗು (ಜಿಪಿಯುಪಿ-28), ಬೀಜದ ದಂಟು (ಕೆಬಿಜಿಎ-15), ಕಬ್ಬು (ಸಿಒವಿಸಿ-18061) ಹಲಸು (ಬೈರಚಂದ್ರ), ಮೇವಿನ ತೋಕೆ ಗೋಧಿ (ಆರ್​ಒ-11-1) ನೂತನ ತಳಿಗಳಾಗಿವೆ. ಹೊಸದಾಗಿ ಸಂಶೋಧಿಸಿದ ಎಲ್ಲ ತಳಿಗಳು ಈಗಾಗಲೇ ಬೆಳೆಯುತ್ತಿರುವ ತಳಿಗಳಿಗಿಂತ ಶೇ.10 ಇಳುವರಿ ಹೆಚ್ಚು ಬರುತ್ತವೆ. ಜತೆಗೆ, ಎಲ್ಲ ಬಗೆಯ ವಾತಾವರಣಕ್ಕೂ ಒಗ್ಗಿಕೊಳ್ಳುವ ಶಕ್ತಿಯನ್ನು ಹೊಂದಿದ್ದು, ಬೆಳೆಗಳಿಗೆ ಬಾಧಿಸುವ ರೋಗಗಳಿಗೆ ಬೇಗನೆ ತುತ್ತಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net