

ಬೆಂಗಳೂರು: ಕ್ರೇನ್ ವಾಹನದ ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ನಡೆದು, ಅದರಲ್ಲಿ ಓರ್ವ ಪಾದಚಾರಿ ಮೃತಪಟ್ಟ ಘಟನೆ ಮಾಗಡಿರಸ್ತೆಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ವ್ಯಾಪ್ತಿಯ ಸುಂಕದಕಟ್ಟೆ ಬಳಿ ಕ್ರೇನ್ ಇಷ್ಟೆಲ್ಲ ಅವಾಂತರ ಸೃಷ್ಟಿಸಿದೆ. ಕಾರುಗಳು, ಆಟೋ, ದ್ವಿಚಕ್ರವಾಹನಗಳಿಗೆ ಗುದ್ದಿ, ಓರ್ವನ ಜೀವವನ್ನು ತೆಗೆದಿದೆ. ಇದನ್ನೂ ಓದಿ: ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದವನಿಗೆ ಅಲ್ಲೇ ಕಾದಿತ್ತು ಸಾವು
ಸ್ಥಳೀಯ ನಿವಾಸಿ ಮುನಿಯಪ್ಪ ಮೃತರು. ಇವರು ನಡೆದುಕೊಂಡು ಮನೆಗೆ ಹೊರಟಿದ್ದರು. ಸುಂಕದ ಕಟ್ಟೆ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದಾಗ, ಅದೇ ಮಾರ್ಗವಾಗಿ ಬಂದ ಕ್ರೇನ್ವೊಂದು ಬ್ರೇಕ್ ವೈಫಲ್ಯದಿಂದ ಹಿಗ್ಗಾಮುಗ್ಗಾ ಚಲಿಸಿದೆ. ಚಾಲಕ ವಾಹನವನ್ನು ನಿಲ್ಲಿಸಲು ಯತ್ನಿಸಿದರೂ ಸಾಧ್ಯವಾಗದೆ, ನಡೆದುಕೊಂಡು ಹೋಗುತ್ತಿದ್ದ ಮುನಿಯಪ್ಪನಿಗೆ ಡಿಕ್ಕಿ ಹೊಡೆದಿದೆ. ಅದಾದ ಬಳಿಕ ಎದುರಿನಿಂದ ಬರುತ್ತಿದ್ದ ಮೂರ್ನಾಲ್ಕು ವಾಹನಗಳಿಗೆ ಗುದ್ದಿದೆ.
ಆಟೋ ನುಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕ್ರೇನ್ ಚಾಲಕ ನಾಪತ್ತೆಯಾಗಿದ್ದಾನೆ. ಕಾಮಾಕ್ಷಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.