

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಯ ರಾಜಕೀಯ ಮರು ಪ್ರವೇಶದ ಬಗ್ಗೆ ಸಾಕಷ್ಟು ಕುತೂಹಲ ಗರಿಗೆದರಿದೆ. ರೆಡ್ಡಿ ಅವರು ಮತ್ತೆ ಬಿಜೆಪಿ ಸೇರಲಿದ್ದಾರಾ? ಅಥವಾ ಹೊಸ ರಾಜಕೀಯ ಪಕ್ಷ ಆರಂಭಿಸಲಿದ್ದಾರಾ? ಎಂಬ ಪ್ರಶ್ನೆಗಳ ಮೇಲೆ ಭಾರಿ ಚರ್ಚೆ ನಡೆಯುತ್ತಿದೆ. ಇದೆಲ್ಲದರ ನಡುವೆ ಡಿ.25ಕ್ಕೆ ಮಹತ್ವದ ಘೋಷಣೆ ಮಾಡಲು ರೆಡ್ಡಿ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಡಿಸೆಂಬರ್ 25ಕ್ಕೆ ಸುದ್ದಿಗೋಷ್ಠಿ ಕರೆದಿರುವ ಜನಾರ್ದನ ರೆಡ್ಡಿ, ತಮ್ಮ ರಾಜಕೀಯ ನಿಲುವು ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, ಹೊಸ ಪಕ್ಷ ಘೋಷಣೆ ಮಾಡ್ತಾರಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ.
ದೆಹಲಿಯಿಂದ ಬಂದ ಬಳಿಕ ಡಿಸೆಂಬರ್ 18 ಕ್ಕೆ ಬಹಿರಂಗವಾಗಿ ಮಾತಾಡುವೆ ಎಂದು ರೆಡ್ಡಿ ಹೇಳಿದ್ದರು. ಆದರೆ, ಇಂದು ಬೇರೆ ದಿನಾಂಕ ನಿಗದಿ ಮಾಡಿದ್ದಾರೆ. ಮತ್ತೆ ಬಿಜೆಪಿ ಸೇರಲು ಉತ್ಸಾಹ ತೋರಿರುವ ಜನಾರ್ದನ ರೆಡ್ಡಿ, ಬಿಜೆಪಿಗೆ ಕೊಟ್ಟಿದ್ದ ಗಡುವನ್ನು ಮತ್ತೆ ಮುಂದಕ್ಕೆ ತಳ್ಳಿದ್ದಾರೆ. ಬಿಜೆಪಿಯಿಂದ ಮತ್ತೆ ಎರಡನೇ ಇನ್ನಿಂಗ್ಸ್ ರಾಜಕೀಯ ಆರಂಭಿಸಲು ರೆಡ್ಡಿ ಸರ್ಕಸ್ ನಡೆಸುತ್ತಿದ್ದು, ಬಿಜೆಪಿ ಗ್ರೀನ್ ಸಿಗ್ನಲ್ ಕೊಡದಿದ್ದಕ್ಕೆ ರೆಬಲ್ ಆಗಿರುವ ರೆಡ್ಡಿ, ಹೊಸ ಪಕ್ಷ ಕಟ್ಟುವ ಸೂಚನೆ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿಗೂ ಮುನ್ನ ರೆಡ್ಡಿ ಅವರು ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಮಠಗಳು ಹಾಗೂ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ನಾಳೆಯಿಂದ (ಡಿ.19) ಜನಾರ್ದನ ರೆಡ್ಡಿ ಮಠ ಮಾನ್ಯಗಳು, ಮುಖಂಡರ ಭೇಟಿಗೆ ಪ್ರವಾಸ ಮಾಡಲಿದ್ದಾರೆ. ನಾಳೆ ತುಮಕೂರು ಸಿದ್ಧಗಂಗಾ ಮಠದಿಂದ ಪ್ರವಾಸ ಆರಂಭಿಸಲಿರುವ ಜನಾರ್ನ ರೆಡ್ಡಿ, ಎಲ್ಲ ಪ್ರವಾಸ ಮುಗಿಸಿ ಬೆಂಗಳೂರಿನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪ್ರವಾಸದ ವಿವರ ಈ ಕೆಳಕಂಡಂತಿದೆ
* ಡಿ.19 ರಂದು ಸಿದ್ದಗಂಗಾ ಮಠ,
* ಡಿ. 20ರಂದು ಗದಗಿನ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ
* ಡಿ. 21ರಂದು ಮಸ್ಕಿ ಕ್ಷೇತ್ರದಲ್ಲಿ ರಾಯಚೂರು ಬಳ್ಳಾರಿ, ಕೊಪ್ಪಳ ವಿಜಯನಗರ ಭಾಗದ ಪ್ರಮುಖ ಮುಖಂಡರ ಸಭೆ
* ಡಿ. 22ರಂದು ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿ ಮತ್ತು ಅಂದು ಗಂಗಾವತಿಯಲ್ಲಿ ಪ್ರಮುಖ ಸಭೆ
* ಕೊನೆಯಲ್ಲಿ ಡಿ.25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ಸುದ್ದಿಗೋಷ್ಠಿ ಮಾಡಿ ರಾಜಕೀಯ ನಿಲುವು ಪ್ರಕಟ