ಜನಾರ್ದನ ರೆಡ್ಡಿ ರಾಜಕಾರಣಕ್ಕೆ ಮುನ್ನುಡಿ ಆಗುತ್ತಾ ಗಂಗಾವತಿ ಗೃಹ ಪ್ರವೇಶ? ಪತ್ನಿ ಅರುಣಾ ಲಕ್ಷ್ಮೀ ಹೇಳಿದ್ದಿಷ್ಟು…

Aruna Lakshmi
Published on

ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಹೊಸ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಮತ್ತೆ ಧುಮುಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವುದರ ನಡುವೆಯೇ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಗೃಹ ಪ್ರವೇಶ ನೆರವೇರಿಸಿರುವುದು ರಾಜಕೀಯ ಸುದ್ದಿಗೆ ಪುಷ್ಠಿ ನೀಡಿದೆ.

ಜನಾರ್ದನ ರೆಡ್ಡಿ ಅವರು ದೆಹಲಿ ಪ್ರವಾಸದಲ್ಲಿರುವ ಹಿನ್ನಲೆಯಲ್ಲಿ ಪತ್ನಿ ಅರುಣಾ ಲಕ್ಷ್ಮೀ ಅವರು ಗೋ ಪೂಜೆ ಸಲ್ಲಿಸಿ ಗೃಹ ಪ್ರವೇಶ ನೆರವೇರಿಸಿದ್ದಾರೆ. ಹೊಸ ಮನೆಯು ತಳಿರು ತೋರಣದಿಂದ ಕಂಗೊಳಿಸುತ್ತಿದ್ದು, ರಾತ್ರಿಯಿಂದಲೇ ಪೂಜೆ-ಪುನಸ್ಕಾರ ಮತ್ತು ಹೋಮ-ಹವನಗಳು ನಡೆಯುತ್ತಿವೆ. ಗೃಹ ಪ್ರವೇಶಕ್ಕೆ ಕೆಲವೇ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಬಳ್ಳಾರಿ ಹಾಗೂ ಗಂಗಾವತಿಯ ಶಂಕರ ಮಠದ ಅರ್ಚಕರಿಂದ ಗೃಹ ಪ್ರವೇಶದ ಪೂಜಾ ವಿಧಾನಗಳು ನಡೆಯುತ್ತಿದೆ. ಕುಟುಂಬದವರ ಜೊತೆಗೂಡಿ ಅರುಣಾ ಲಕ್ಷ್ಮೀ ಅವರು ಗೃಹ ಪ್ರವೇಶ ನೆರವೇರಿಸಿದ್ದಾರೆ.

ಇನ್ನು ಈ ಗೃಹ ಪ್ರವೇಶ ರೆಡ್ಡಿ ರಾಜಕಾರಣಕ್ಕೆ ಮುನ್ನಡಿ ಆಗುತ್ತಾ ಎಂಬ ಚರ್ಚೆ ಇದೀಗ ಆರಂಭವಾಗಿದೆ. ಗಂಗಾವತಿಯಿಂದಲೇ ರಾಜ್ಯ ರಾಜಕಾರಣಕ್ಕೆ ರೆಡ್ಡಿ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗೃಹ ಪ್ರವೇಶದ ನಂತರ ಎಲ್ಲವೂ ಹೇಳ್ತಿನಿ ಎಂದು ರೆಡ್ಡಿ ಹೇಳಿದ್ದರು. ದೆಹಲಿಯಿಂದ ಬಂದ ಕೂಡಲೇ ರೆಡ್ಡಿ ಅವರು ರಾಜಕೀಯ ನಿರ್ಧಾರವನ್ನು ಘೋಷಿಸಲಿದ್ದಾರೆ. ಆದರೆ, ಅವರು ಹೊಸ ಪಕ್ಷಕ್ಕೆ ಸೈ ಅಂತಾರಾ? ಅಥವಾ ಬಿಜೆಪಿಯಿಂದಲೇ ಸ್ಪರ್ಧಿಸುತ್ತಾರಾ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ.

ಗೃಹ ಪ್ರವೇಶದ ನಡುವೆ ಸುದ್ದಿಗಾರರ ಜೊತೆ ಮಾತನಾಡಿದ ಅರುಣಾ ಲಕ್ಷ್ಮೀ, ಜನಾರ್ದನ ರೆಡ್ಡಿಯವರು ಜನರ ಮಧ್ಯೆ ಇರಬೇಕು ಅಂತ ನಿರ್ಧಾರ ಮಾಡಿದ್ದಾರೆ. ರಾಜಕೀಯದ ಬಗ್ಗೆ ಮುಂದಿನ ವಾರ ಅವರೇ ಎಲ್ಲವನ್ನ ಮಾತನಾಡ್ತಾರೆ. ದೇವಾನು ದೇವತೆಗಳಿಗೆ ವನವಾಸ ತಪ್ಪಿಲ್ಲ. ಕಳೆದ 12 ವರ್ಷಗಳಿಂದ ರೆಡ್ಡಿಯವರು ಕಷ್ಟ ಅನುಭವಿಸಿದ್ದಾರೆ. ಈಗ ಜನಸೇವೆಗೆ ಮರಳುವುದಕ್ಕೆ ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಮನೆ ಮಾಡಿದ್ರೆ ದೂರ ಆಗ್ತಿತ್ತು. ಹೀಗಾಗಿ ಗಂಗಾವತಿಯಲ್ಲಿ ಮನೆ ಮಾಡಿದ್ದೇವೆ ಎನ್ನುವ ಮೂಲಕ ರಾಜಕೀಯದ ಬಗ್ಗೆ ಅವರು ಯಾವುದೇ ಗುಟ್ಟು ಬಿಟ್ಟು ಕೊಡಲಿಲ್ಲ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net