

ಧರ್ಮಪುರಿ: ತಮ್ಮ ಮನೆಯ ಮುಂದೆ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಅನುಮತಿ ನೀಡುವಂತೆ ತಮಿಳುನಾಡಿನ ರೈತನೊಬ್ಬ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿರುವ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗಣೇಶನ್ (57) ರೈತನ ಹೆಸರು. ತಮಿಳುನಾಡಿನ ಧರ್ಮಪುರಿ ಮೂಲದ ಗಣೇಶನ್ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.
ಅಂದಹಾಗೆ ಗಣೇಶನ್ ಬಳಿ ಯಾವುದೇ ಹೆಲಿಕಾಪ್ಟರ್ ಇಲ್ಲ. ಆದರೆ, ಆತನ ಕಿರಿಯ ಮಗಳು ಆಟಿಕೆ ಹೆಲಿಕಾಪ್ಟರ್ ಹೊಂದಿದ್ದರೆ, ಹಿರಿಯ ಮಗಳು ಹೆಲಿಕಾಪ್ಟರ್ ಫೋಟೋವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು, ತನ್ನ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಗಣೇಶನ್ ಅವರು ಈ ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಸಮಸ್ಯೆಯ ಬಗ್ಗೆ ಮಾತನಾಡಿರುವ ಗಣೇಶನ್, ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ 4 ತಿಂಗಳಿಂದ ಸಂಬಂಧಿಕರ ಮನೆಯಲ್ಲೇ ಉಳಿದ್ದೇವೆ. ರಸ್ತೆ ಇಲ್ಲದಿರುವ ಬಗ್ಗೆ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ದೂರು ದಾಖಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಆದ್ದರಿಂದ ಎಲ್ಲರ ಗಮನ ಸೆಳೆಯಲು ಈ ರೀತಿಯ ವಿಶೇಷ ಪ್ರಯತ್ನ ಮಾಡಿದೆ ಎಂದು ಸುದ್ದಿಗಾರರ ಮುಂದೆ ತಿಳಿಸಿದ್ದಾರೆ. (ಏಜೆನ್ಸೀಸ್)