ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

Kantara
Published on

ಮುಂಬೈ: ರಿಷಭ್​ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾ ರಾತ್ರೋರಾತ್ರಿ ಅವರಿಗೆ ಪ್ಯಾನ್​ ಇಂಡಿಯಾ ಸೂಪರ್​ಸ್ಟಾರ್​ ಎಂಬ ಪಟ್ಟ ತಂದುಕೊಟ್ಟಿದೆ. ಸ್ಯಾಂಡಲ್​ವುಡ್​ನಲ್ಲಿ ಶುರುವಾದ ಕಾಂತಾರ ಸುನಾಮಿ ಬಾಲಿವುಡ್​ವರೆಗೂ ತಲುಪಿ ಹೊಸ ಹವಾ ಸೃಷ್ಟಿಸಿದೆ. ಕಾಂತಾರದಿಂದ ರಿಷಭ್​ ಖ್ಯಾತಿ ಹೆಚ್ಚಿದ್ದು, ಈ ಬಗ್ಗೆ ಬಾಲಿವುಡ್​ ನಟ ನವಾಜುದ್ದೀನ್​ ಸಿದ್ದಿಖಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ರಿಷಭ್​ ಮತ್ತು ಸಿದ್ದಿಖಿ ಭಾಗವಹಿಸಿದ್ದರು. ಈ ವೇಳೆ ರಿಷಭ್​ ಬಗ್ಗೆ ಒಂದೆರೆಡು ಮಾತನಾಡುವಂತೆ ಸಿದ್ದಿಖಿಯನ್ನು ಕೇಳಲಾಯಿತು. ಇಡೀ ದೇಶ ಕಾಂತಾರದಲ್ಲಿ ರಿಷಭ್​ ಅವರನ್ನು ನೋಡಿ ಶಾಕ್​ ಆಗಿದೆ. ರಿಷಭ್​ ಅವರು ತಮ್ಮ ಸಿನಿಮಾದ ಪ್ರಚಾರವನ್ನೇ ಮಾಡಲಿಲ್ಲ. ಸದ್ದಿಲ್ಲದೆ ತಮ್ಮ ಕೆಲಸ ಮುಗಿಸಿ, ಅದರಿಂದಲೇ ಎಲ್ಲರನ್ನು ಮೆಚ್ಚಿಸಿದರು. ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ಸ್ವಲ್ಪ ಹೊಟ್ಟೆ ಕಿಚ್ಚು ಬರುವುದು ಸಹಜ ಮತ್ತು ಅದೇ ಹೊಟ್ಟೆಕಿಚ್ಚಿನಿಂದ ಒಳ್ಳೆಯ ಸ್ಪರ್ಧೆಗೆ ಸ್ಫೂರ್ತಿ ಸಿಗುತ್ತದೆ ಎಂದರು.

ಹೊಟ್ಟೆ ಕಿಚ್ಚು ಎಂಬ ಪದವನ್ನು ಪ್ರಮುಖವಾಗಿ ಉಲ್ಲೇಖಿಸಿ, ಸಿದ್ದಿಖಿ ಅವರನ್ನು ವರದಿಗಾರ ಇನ್ನಷ್ಟು ಪ್ರಚೋದಿಸಿದಾಗ, ನಿಜವಾಗಿಯೂ ಹೊಟ್ಟೆ ಕಿಚ್ಚು ಇದೆ. ಏಕೆಂದರೆ, ಆತ ಅಂತಹ ಒಳ್ಳೆಯ ಕೆಲಸವನ್ನು ಮಾಡಿದ್ದಾನೆ. ಆದರೆ, ಇದು ಕೆಟ್ಟ ರೀತಿಯ ಹೊಟ್ಟೆಕಿಚ್ಚು ಅಲ್ಲ. ಈ ರೀತಿಯ ಹೊಟ್ಟೆ ಕಿಚ್ಚು ನಿಮ್ಮನ್ನು ಕಾಲ್ಬೆರಳುಗಳ ಮೇಲೆ ನಿಲ್ಲುವಂತೆ ಮಾಡುತ್ತದೆ ಮತ್ತು ಪರಿಶ್ರಮ ಪಡುವಂತೆ ಹುರಿದುಂಬಿಸುತ್ತದೆ ಎಂದು ರಿಷಭ್​ ಅವರ ಯಶಸ್ಸನ್ನು ತಮ್ಮದೇ ರೀತಿಯಲ್ಲಿ ವರ್ಣಿಸಿದರು.

ಸಿದ್ದಿಖಿ ಹೊಗಳಿಕೆಗೆ ಪ್ರತಿಕ್ರಿಯಿಸಿದ ರಿಷಭ್​, ನಜಾಜುದ್ದೀನ್​ ಸಿದ್ದಿಖಿ ಅವರಿಂದ ಸ್ಫೂರ್ತಿಗೊಂಡಿರುವುದಾಗಿ ಹೇಳಿದರು. ನವಾಜ್​ ಭಾಯ್​ ಅವರ ಅನೇಕ ಸಿನಿಮಾಗಳನ್ನು ನಾನು ನೋಡಿದ್ದೇನೆ. ಅವರ ಸಿನಿ ಪಯಣ ಪರಿಶ್ರಮ ಮತ್ತು ಪ್ರಯತ್ನಗಳಿಂದ ಕೂಡಿದೆ. ಅವರು ಕೂಡ ನಮ್ಮಂತೆಯೇ. ನಾವು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಮಧ್ಯಮ ವರ್ಗದ ಜನರು ಆದರೆ, ನಾವು ಸಿನಿಮಾ ಇಂಡಸ್ಟ್ರಿಗೆ ಬರಲು ಬಯಸಿ, ಅದನ್ನೇ ಇದೀಗ ದೊಡ್ಡದನ್ನಾಗಿ ಮಾಡಿಕೊಂಡೆವು ಎಂದರು.

ಸಿದ್ದಿಖಿ ಅವರು ರಂಗಕರ್ಮಿ ಹಿನ್ನೆಲೆಯುಳ್ಳವರು. ಒಂದು ಬಿಗ್​ ಬ್ರೇಕ್​ ಸಿಗುವವರೆಗೂ ಅನೇಕ ಪಾತ್ರಗಳನ್ನು ಅವರು ನಿಭಾಯಿಸಿದ್ದಾರೆ. ನಾನು ಕೂಡ ಅಷ್ಟೇ ಒಂದು ದೊಡ್ಡ ಬ್ರೇಕ್​ ಸಿಗುವವರೆಗೂ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿದ್ದೇನೆ. ಸಿದ್ದಿಖಿ ಅವರು ನಮಗಿತಂಲೂ ಹಿರಿಯರು. ನಾವು ಒಂದೇ ಪ್ರಯಾಣದಲ್ಲಿದ್ದೇವೆ ಎಂದು ರಿಷಭ್​, ಸಿದ್ದಿಖಿ ಅವರನ್ನು ಮನಸಾರೆ ಹೊಗಳಿದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಿದ್ದಿಖಿ ಅವರು ಮುಂದಿನ ಹಡ್ಡಿ ಸಿನಿಮಾದಲ್ಲಿ ತೃತೀಯಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಡೆ ರಿಷಭ್​ ಅವರ ಕಾಂತಾರ ಸಿನಿಮಾದ ಹಿಂದಿ ಆವೃತ್ತಿಯು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ತಮಿಳು, ತೆಲುಗು ಮತ್ತು ಕನ್ನಡ ಆವೃತ್ತಿ ಅಮೇಜಾನ್​ ಪ್ರೈಮ್​ನಲ್ಲಿ ತೆರೆಕಂಡಿದೆ. ಇದರ ನಡುವೆ ಕಾಂತಾರ-2 ಬಗ್ಗೆ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net