

ಕೋಲ್ಕತ: ವ್ಯಕ್ತಿಯ ಮೃತದೇಹದೊಂದಿಗೆ ರಕ್ತಸಂಬಂಧಿ ದಿನ ಕಳೆದ ಪ್ರಕರಣಗಳು ಅಪರೂಪಕ್ಕೊಮ್ಮೆ ಕಂಡುಬರುತ್ತಿದ್ದು, ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಗಳ ಶವದೊಂದಿಗೆ ತಾಯಿ ಐದು ದಿನಗಳನ್ನು ಕಳೆದಿದ್ದಾರೆ.
ಕೋಲ್ಕತದ ರಾಣಿಕುತಿ ಎಂಬಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ತಾಯಿ ದೀಪಾಲಿ ಬಸು ತನ್ನ 32 ವರ್ಷದ ಮಗಳು ದೋಯೆಲ್ ಬಸುವಿನ ಶವದ ಜೊತೆ ಐದು ದಿನಗಳನ್ನು ಕಳೆದಿದ್ದಾರೆ. ತಾಯಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ.
ತಾಯಿ-ಮಗಳು ವಾಸವಿದ್ದ ಮನೆಯನ್ನೂ ವಶಕ್ಕೆ ಪಡೆದಿರುವ ಪೊಲೀಸರು, ಮಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ತಾಯಿ-ಮಗಳು ಇಬ್ಬರೂ 2006ರಿಂದ ಈ ಮನೆಯಲ್ಲಿ ವಾಸವಿದ್ದು, ಅಕ್ಕಪಕ್ಕದವರ ಜತೆ ಅಂಥ ಒಡನಾಟ ಹೊಂದಿಲ್ಲ. ಈ ಮನೆಗೆ ಸಾಮಾನ್ಯವಾಗಿ ಆಹಾರ ಪಾರ್ಸೆಲ್ ಬರುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಐದು ದಿನಗಳಿಂದ ತಾಯಿ ಮಾತ್ರ ಹೊರಗೆ ಕಾಣಿಸುತ್ತಿದ್ದು, ಮಗಳ ಬಗ್ಗೆ ವಿಚಾರಿಸಿದಾಗೆಲ್ಲ ಒಂದೋ ಅವಳು ಮಲಗಿದ್ದಾಳೆ ಇಲ್ಲವೇ ವಿಶ್ರಾಂತಿಯಲ್ಲಿದ್ದಾಳೆ ಎಂದು ಹೇಳುತ್ತಿದ್ದರು. ಆದರೆ ಸೋಮವಾರ ಮಧ್ಯಾಹ್ನ ಬಂದಿದ್ದ ಡೆಲಿವರಿ ಬಾಯ್ ಮನೆಯಲ್ಲಿನ ವಾಸನೆಯನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದು ಸಹಜ ಸಾವೇ, ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದು, ಅದು ಸಿಕ್ಕ ಬಳಿಕ ತನಿಖೆಗೆ ಮಹತ್ವದ ಸುಳಿವು ಸಿಗಲಿದೆ ಎನ್ನಲಾಗಿದೆ.