ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ವಜಾ; ಮತದಾರ ಪಟ್ಟಿ ಬಗ್ಗೆ ಮಾತಾಡಿದ್ದೇ ಮುಳುವಾಯ್ತಾ? |K N Rajanna

K N Rajanna
Published on

K N Rajanna: ರಾಜ್ಯ ಸಹಕಾರ ಖಾತೆ ಸಚಿವ ಕೆ.ಎನ್​.ರಾಜಣ್ಣ ಸೋಮವಾರ(ಆಗಸ್ಟ್​ 11) ಮಧ್ಯಾಹ್ನ ದಿಢೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಿಎಂಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಸಿಎಂ ರಾಜ್ಯಪಾಲರಿಗೆ ಕಳಿಸಿದ್ದು, ಅಂಗೀಕರಿಸಿದ್ದಾರೆ ಎನ್ನಲಾಗಿತ್ತು. ಆದ್ರೆ ಅವರನ್ನು ವಜ ಮಾಡಲಾಗಿದೆ ಎಂದು ವರದಿಯಾಗಿದೆ.

ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಕೆ.ಎನ್.ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಲಾಗಿದೆ ಎನ್ನಲಾಗಿದೆ. ತಮ್ಮ ಪುತ್ರನ ಜೊತೆ ಸಿಎಂ ಕಚೇರಿಗೆ ಆಗಮಿಸಿದ್ದ ರಾಜಣ್ಣ, ಸ್ವಲ್ಪ ಸಮಯ ಚರ್ಚೆ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತದಾರರ ಪಟ್ಟಿ ಸಂಬಂಧ ಅವರು ನೀಡಿದ ಹೇಳಿಕೆ ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.

ದೇಶದಲ್ಲಿ ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿಕೊಂಡು ಮತಗಳ್ಳತನದಲ್ಲಿ ತೊಡಗಿದೆ, ಅದಕ್ಕೆ ನಮ್ಮ ಬಳಿ ಅಣು ಬಾಂಬ್​ನಂತಹ ದಾಖಲೆ ಇದೆ. ಅದನ್ನು ಸಿಡಿಸಿದರೇ ದೇಶದಲ್ಲಿ ಚುನಾವಣಾ ಆಯೋಗವೇ ಇರುವುದಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಆಗಸ್ಟ್​ 7ರಂದು ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಬೆಂಗಳೂರಿನ ಕೇಂದ್ರ ಲೋಕಸಭಾ ವ್ಯಾಪ್ತಿಯ ಮಹದೇವಪುರ ಕ್ಷೇತ್ರದ ಮತದಾರ ಪಟ್ಟಿ ದಾಖಲೆ ಬಿಡುಗಡೆ ಮಾಡಿದ್ದರು.

ಈ ಸಮಯದಲ್ಲಿ ಇಡೀ ದೇಶದಲ್ಲಿ ರಾಹುಲ್ ಗಾಂಧಿಯ ದಾಖಲೆ ಬಗ್ಗೆ ಚರ್ಚೆ ನಡೆಯುವಾಗ, ಸಚಿವ ಕೆ.ಎನ್.ರಾಜಣ್ಣ ನೀಡಿದ ಹೇಳಿಕೆಯೇ ಕಾಂಗ್ರೆಸ್ ಪಕ್ಷ ಮತ್ತು ಅದರ ಹೈಕಮಾಂಡ್ ನಾಯಕರಿಗೆ ಮುಜುಗುರ ತಂದಿದೆ. ಜೊತೆಗೆ ಕರ್ನಾಟಕ ವಿಧಾನಸಭೆಯಲ್ಲೂ ಕೂಡ ಆ ಹೇಳಿಕೆ ಪ್ರಸ್ತಾಪಿಸಿ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ಮತದಾರರ ಪಟ್ಟಿ ಅಕ್ರಮ ವಿಷಯಕ್ಕೆ ಬಿಜೆಪಿ ಅವರ ಹೇಳಿಕೆಯನ್ನೇ ಕೌಂಟರ್ ಆಗಿ ಬಳಸಿಕೊಂಡಿದೆ.

ಕೆ.ಎನ್.ರಾಜಣ್ಣ ಅಂದು ಹೇಳಿದ್ದೇನು?

ಆಗಸ್ಟ್​ 7ರಂದು ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ್ದ ಕೆ.ಎನ್.ರಾಜಣ್ಣ, "ತಮ್ಮ ನಾಯಕ ರಾಹುಲ್ ಗಾಂಧಿಯವರ ಆರೋಪವನ್ನು ಬೆಂಬಲಿಸಿದ್ದರು. ಲೋಕಸಭೆ ಚುನಾವಣಾ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಆದರೆ, ಅದು ನಮ್ಮದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಸಂಭವಿಸಿದೆ" ಎಂದು ಹೇಳಿದ್ದರು

"ಮತದಾರರ ಪಟ್ಟಿಯನ್ನು ಯಾವಾಗ ಸಿದ್ಧಪಡಿಸಲಾಯಿತು? ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಸಿದ್ಧಪಡಿಸಲಾಗಿತ್ತು. ಆ ಸಮಯದಲ್ಲಿ, ಎಲ್ಲರೂ ಕಣ್ಣು ಮುಚ್ಚಿ ಕುಳಿತಿದ್ದರು. ಅಕ್ರಮ ನಡೆದಿದ್ದು ಸತ್ಯ. ಯಾವುದೂ ಸುಳ್ಳಿಲ್ಲ. ಆ ವೇಳೆ ನಾವು ಅದನ್ನು ಗಮನಿಸಲಿಲ್ಲ. ಆದ್ದರಿಂದ ಭವಿಷ್ಯದಲ್ಲಿ ನಾವು ಜಾಗರೂಕರಾಗಿರಬೇಕು. ಮತದಾರ ಪಟ್ಟಿಯ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕಾದದ್ದು ಜವಾಬ್ದಾರಿ. ಕರಡು ಮತದಾರರ ಪಟ್ಟಿ ರಚಿಸಿದಾಗ ನಾವು ಆಕ್ಷೇಪಣೆ ಸಲ್ಲಿಸಬೇಕು. ಅದು ನಮ್ಮ ನಾಯಕರ ಜವಾಬ್ದಾರಿ. ಆಗ ಸುಮ್ಮನಿದ್ದು, ಈಗ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದರು.

ಕೆ.ಎನ್​.ರಾಜಣ್ಣ  ಹೇಳಿಕೆ ಇದೇ ಮೊದಲಲ್ಲ

ನೇರ ನಿಷ್ಠರು ಮಾತಿಗೆ ಹೆಸರಾಗಿರುವ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಈ ಹಿಂದೆ ಅಧಿಕಾರ ಹಂಚಿಕೆ ಕುರಿತಾದ ಮಾತಿಗೆ ಹೈಕಮಾಂಡ್​ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಅಂದ್ರು, ಸಿಎಂ ಸಿದ್ದರಾಮಯ್ಯನವರೇ 5 ವರ್ಷ ಪೂರೈಕೆ ಮಾಡುತ್ತಾರೆ ಎಂದು ಹೇಳಿದ್ದರು. ಹೈಕಮಾಂಡ್ ನೋಟಿಸ್ ಕೊಟ್ಟರೆ ಕೊಡಲಿ ಉತ್ತರ ಕೊಡುತ್ತೇನೆ ಎಂದಿದ್ದರು.

ಬಳಿಕ ದಲಿತ ಸಚಿವರು, ಶಾಸಕರ ಸಭೆಗೂ ಹೈಕಮಾಂಡ್ ಮಾತಿಗೆ ಕ್ಯಾರೆ ಎನ್ನದೇ ಸಭೆ ನಡೆಸಿದ್ದರು. ಇತ್ತೀಚೆಗೆ ಕಾಂಗ್ರೆಸ್​ ಶಾಸಕರ ಜೊತೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೇವಾಲ ಸರಣಿ ಸಭೆ ನಡೆಸಿದ್ದರು. ಇದಕ್ಕೂ ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಸಚಿವರು ಜೊತೆ ಸುರ್ಜೇವಾಲ ನಡೆಸಿದ ಸಭೆ ಗೈರಾಗಿದ್ದರು.

ಮುಂದಿನ ಸೆಪ್ಟೆಂಬರ್​ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗುತ್ತೆ ಎಂದು ಹೇಳಿಕೆ ಕೊಟ್ಟಿದ್ದರು. ಇದು ರಾಜ್ಯದಲ್ಲಿ ಅಧಿಕಾರ ಹಂಚಿಕೆ ಚರ್ಚೆಯನ್ನು ಮತ್ತಷ್ಟು ಮುನ್ನಲೆಗೆ ತಂದಿತ್ತು. ನನ್ನ ವಿರುದ್ಧ ಹನಿಟ್ರ್ಯಾಪ್ ಷಡ್ಯಂತ್ರ ನಡೆದಿದೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಕುರಿತು ತನಿಖೆ ನಡೆದು ಅಧಿಕಾರಿಗಳಿಗೆ ರಾಜಣ್ಣ ಸರಿಯಾಗಿ ಸಹಕಾರ ನೀಡಿಲ್ಲ ಎನ್ನಲಾಗಿದ್ದು, ಪ್ರಕರಣ ಕ್ಲೋಸ್ ಮಾಡಲಾಗಿದೆ.

ಸಚಿವ ರಾಜಣ್ಣ ವಜಾಕ್ಕೆ ಬಿಜೆಪಿ ಹೇಳಿದ್ದೇನು?

ಸಹಕಾರ ಸಚಿವ ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ವಜಾಗೊಳಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿ, "ಕಾಂಗ್ರೆಸ್ ಪಕ್ಷದೊಳಗೆ ಪ್ರಜಾಪ್ರಭುತ್ವವಿಲ್ಲ. ನೀವು ಸತ್ಯ ಹೇಳಿದರೆ ರಾಜೀನಾಮೆ ನೀಡುವಂತೆ ಕೇಳಲಾಗುತ್ತದೆ" ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net