

Rahul Gandhi Arrest: ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿ ಸಂಸತ್ತಿನಿಂದ ಚುನಾವಣಾ ಆಯೋಗದವರೆಗೆ ಸೋಮವಾರ (ಆಗಸ್ಟ್ 11) ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇಂಡಿಯಾ ಕೂಟದ ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಜ್ಞಾಪಕ ಪತ್ರ ಸಲ್ಲಿಸುವ ಗುರಿಯನ್ನು ಹೊಂದಿದ್ದ ಮೆರವಣಿಗೆಯನ್ನು ಪೊಲೀಸರು ಮಧ್ಯದಲ್ಲಿ ತಡೆದರು, ಇದು ಸಂಸದರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ತೀವ್ರ ಮಾತಿನ ಚಕಮಕಿಗೂ ಸಾಕ್ಷಿಯಾಯಿತು ಎನ್ನಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಸತ್ಯವು ದೇಶದ ಮುಂದೆ ಇದ್ದು, ಈ ಹೋರಾಟ ರಾಜಕೀಯವಲ್ಲ. ಈ ಹೋರಾಟ ಸಂವಿಧಾನವನ್ನು ಉಳಿಸುವ ಹೋರಾಟ. ಈ ಹೋರಾಟ ಒಬ್ಬ ವ್ಯಕ್ತಿ, ಒಂದು ಮತಕ್ಕಾಗಿ. ನಮಗೆ ಶುದ್ಧ ಮತದಾರರ ಪಟ್ಟಿ ಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಸರ್ಕಾರ ಭಯಪಟ್ಟಿದ್ದು, ಹೇಡಿತನದಿಂದ ನಮ್ಮನ್ನೆಲ್ಲಾ ಬಂಧಿಸುತ್ತಿದೆ ಎಂದ ಅವರು, ಭಿನ್ನಾಭಿಪ್ರಾಯವನ್ನು ಬೆದರಿಕೆಯ ಮೂಲಕ ಎದುರಿಸಲಾಗುತ್ತಿದೆ ಎಂದು ಆರೋಪಿಸಿದರು.
ಘೋಷಣೆ ಕೂಗುವಿಕೆ, ಬಂಧನ ಮತ್ತು ಪ್ರತಿಭಟನೆಯ ನಡುವೆ, ಇಬ್ಬರು ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಮಿತಾಲಿ ಬಾಗ್ ಮೂರ್ಛೆ ತಪ್ಪಿದ್ದು, ಅಲ್ಲಿಯೇ ಇದ್ದ ನಾಯಕರುಗಳು ನೀರು ಮತ್ತು ಪ್ರಥಮ ಚಿಕಿತ್ಸೆ ನೀಡಿದರು, ನಂತರ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ವರದಿಯಾಗಿದೆ.
ಬಂಧಿತ ಇಂಡಿಯಾ ಬ್ಲಾಕ್ ನಾಯಕರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬಂಧನಕ್ಕೊಳಗಾದ ಸಂಸದರ ಸಂಖ್ಯೆಯನ್ನು ಎಣಿಸುತ್ತಿದ್ದೇವೆ. ಇಲ್ಲಿ ಪ್ರತಿಭಟನೆಗೆ ಯಾವುದೇ ಅನುಮತಿ ಇರಲಿಲ್ಲ, ವಿಪಕ್ಷ ನಾಯಕರು ಒಪ್ಪಿಗೆ ನೀಡಿದರೆ, ಅವರನ್ನು ಚುನಾವಣಾ ಆಯೋಗದ ಕಚೇರಿಗೆ ತಲುಪಿಸಲು ಸಿದ್ಧ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)