ಮತಕಳ್ಳತನ ಆರೋಪ; ಚುನಾವಣಾ ಆಯೋಗದ ಕಚೇರಿವರೆಗೆ ಇಂಡಿಯಾ ಕೂಟದ ಮೆರವಣಿಗೆ ನಡೆಸುವ ಸಾಧ್ಯತೆ! | INDIA bloc

INDIA bloc
Published on

INDIA bloc: ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವಣಾ ದುಷ್ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸುಮಾರು 300 ಸಂಸದರು ಸೋಮವಾರ (ಆಗಸ್ಟ್ 11) ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ಮೆರವಣಿಗೆ ನಡೆಸುವ ಸಾಧ್ಯತೆ ಇದೆ.

ವಿಪಕ್ಷಗಳ ಸಂಸದರು ಸಂಸತ್ ಭವನದಿಂದ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಲಿದ್ದು, ಎರಡು ಕಿಲೋಮೀಟರ್ ದೂರದಲ್ಲಿರುವ ಚುನಾವಣಾ ಸಂಸ್ಥೆಯ ಕಚೇರಿಯಾದ ನಿರ್ವಚನ ಸದನಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಚುನಾವಣಾ ವಂಚನೆಯ ಆರೋಪಗಳಾದ 'ವೋಟ್ ಚೋರಿ' ವಿರುದ್ಧದ ಆಂದೋಲನವನ್ನು ತೀವ್ರಗೊಳಿಸುವ ಪ್ರತಿಪಕ್ಷಗಳ ಕಾರ್ಯತಂತ್ರದ ಭಾಗವಾಗಿ ಈ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎನ್ನಲಾಗುತ್ತಿದೆ. ಈ ಹೊಂದಾಣಿಕೆಯಿಂದಲೇ ಬಿಜೆಪಿ 2024 ರ ಲೋಕಸಭಾ ಚುನಾವಣೆ ಸೇರಿದಂತೆ ಇತ್ತೀಚಿನ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಆರೋಪಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಮೆರವಣಿಗೆಯ ನೇತೃತ್ವ ವಹಿಸುವ ಸಾದ್ಯತೆಗಳಿವೆ.

ಇಂಡಿಯಾ ಮೈತ್ರಿಕೂಟವು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿವರೆಗಿನ ಮೆರವಣಿಗೆಗೆ ಯಾವುದೇ ಅನುಮತಿ ಕೋರಿಲ್ಲ ಎಂದು ದೆಹಲಿ ಪೊಲೀಸ್​ ಮೂಲಗಳು ತಿಳಿಸಿವೆ.

ರಾಹುಲ್​ ಗಾಂಧಿ ಟ್ವೀಟ್​ನಲ್ಲೇನಿದೆ.?

ಮತಕಳ್ಳತನದ ಬಗ್ಗೆ ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ರಾಹುಲ್ ಗಾಂಧಿ, ವೋಟ್ ಚೋರಿ ಎಂಬುದು, ಒಬ್ಬ ವ್ಯಕ್ತಿ, ಒಂದು ಮತ ಎಂಬ ಮೂಲಭೂತ ಕಲ್ಪನೆಯ ಮೇಲಿನ ದಾಳಿಯಾಗಿದ್ದು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಶುದ್ಧ ಮತದಾರರ ಪಟ್ಟಿ ಅತ್ಯಗತ್ಯ. ಚುನಾವಣಾ ಆಯೋಗದಿಂದ ನಮ್ಮ ಬೇಡಿಕೆ ಸ್ಪಷ್ಟವಾಗಿದ್ದು, ಪಾರದರ್ಶಕವಾದ ಡಿಜಿಟಲ್ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಇದನ್ನು ಸಾಮಾನ್ಯ ಜನರು ಮತ್ತು ರಾಜಕೀಯ ಪಕ್ಷಗಳು ಪರೀಕ್ಷಿಸಬಹುದು ಎಂದಿದ್ದಾರೆ.

ವೋಟ್ ಚೋರಿ ವಿರುದ್ಧ ಹೊಸ ಆನ್‌ಲೈನ್ ಅಭಿಯಾನವನ್ನು ಸಹ ಪ್ರಾರಂಭಿಸಿರುವ ಕಾಂಗ್ರೆಸ್ ನಾಯಕರು, ಪೋರ್ಟಲ್‌ಗೆ ಲಿಂಕ್ ಮತ್ತು ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಜನರು ಈ ಉಪಕ್ರಮದಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net