20 ಪುರುಷರ ಹಣ 1 ಬಸ್​ಗೆ.. ಉಚಿತ ಪ್ರಯಾಣ ಭಾಗ್ಯ​ ಕೊಟ್ಟ ಸರ್ಕಾರಕ್ಕೆ ಪ್ರಯಾಣಿಕನ 6 ನೇರ ಪ್ರಶ್ನೆಗಳಿವು | Freebies

ವಿಜಯವಾಣಿ (68)
Published on

Freebies: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣದ ನಂತರ ಇತ್ತೀಚೆಗಷ್ಟೇ ಟಿಕೆಟ್ ದರವನ್ನು 15% ಹೆಚ್ಚಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯದ ಜನರು ಭುಗಿಲೆದ್ದಿದ್ದಾರೆ. ಮಹಿಳೆಯರಿಗೆ ಫ್ರೀ ಬಸ್​ ಪ್ರಯಾಣ ಎಂದಿನಂತೆ ಮುಂದುವರಿದರೆ, ಅತ್ತ ಪುರುಷ ಪ್ರಯಾಣಿಕರಿಗೆ ಈ ಹಿಂದಿನಕ್ಕಿಂತ ದುಬಾರಿ ಟಿಕೆಟ್ ದರ ನಿಗದಿಯಾಗಿರುವುದು ಹಲವರನ್ನು ಕೆರಳಿಸಿದೆ. ಬಸ್​ನಲ್ಲಿ ಮಹಿಳೆಯರಿಗೆ ನೀಡಿರುವ ಉಚಿತ ಪ್ರಯಾಣ ಸೌಲಭ್ಯ ಎಷ್ಟು ಸರಿ ಎಂಬುದರ ಬಗ್ಗೆ ಕಿರಣ್ ಕುಮಾರ್ ಎಂಬ ಪ್ರಯಾಣಿಕರೊಬ್ಬರು ತಮ್ಮ ಜಾಲತಾಣದ ಖಾತೆಯಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗಳು ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಸಮಾನತೆ ಬಗ್ಗೆ

ಬೆಂಗಳೂರಿನಿಂದ ಮೈಸೂರಿಗೆ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಅನುಭವವನ್ನು ಕಿರಣ್ ಕುಮಾರ್ ತಮ್ಮ ಟ್ವಿಟರ್ (ಪ್ರಸ್ತುತ ಎಕ್ಸ್​)​ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ. ಇದು ವಿಶ್ವ ದರ್ಜೆಯ ಹೆದ್ದಾರಿಯಲ್ಲಿ 210 ರೂ.ನ ಟಿಕೆಟ್​ನಲ್ಲಿ ಬಹಳ ಆರಾಮದಾಯಕ ಪ್ರಯಾಣವಾಗಿತ್ತು. ಆದಾಗ್ಯೂ, ಪ್ರವಾಸದ ಸಮಯದಲ್ಲಿ, ಶುಲ್ಕ ವಿತರಣೆಯಲ್ಲಿನ ಅಸಮಾನತೆ ಬಗ್ಗೆ ನನ್ನಲ್ಲಿ ಒಂದಷ್ಟು ಪ್ರಶ್ನೆಗಳು ಕಾಡಿದವು ಎಂದು ಹೇಳುತ ತಮ್ಮ 6 ಪಾಯಿಂಟ್​ಗಳನ್ನು ಇಲ್ಲಿ ವಿವರಿಸಿದ್ದಾರೆ.

6 ನೇರ ಪ್ರಶ್ನೆ

1. ನಾನು ಪ್ರಯಾಣಿಸಿದ ಬಸ್​ನಲ್ಲಿ ಕನಿಷ್ಠ 50 ಪ್ರಯಾಣಿಕರು ಮಹಿಳೆಯರೇ ಆಗಿದ್ದರು. ಕೇವಲ ಒಂದು ಆಧಾರ್​ ಕಾರ್ಡ್​ ತೋರಿಸಿ ಅವರು ಸುಲಭವಾಗಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದು ನ್ಯಾಯವೇ? ಸಮಾನತೆಯೇ?

2. ಇಡೀ ಒಂದು ಬಸ್‌ನಲ್ಲಿ 20 ಪುರುಷರು ಮಾತ್ರ ಟಿಕೆಟ್​ಗೆ ಹಣ ನೀಡಿದ್ದಾರೆ. ಇದು ನ್ಯಾಯವೇ?

3. ಒಬ್ಬ ವೃದ್ಧ ವ್ಯಕ್ತಿ ಟಿಕೆಟ್​ಗೆ ಹಣ ಪಾವತಿಸಲು ನೋಟುಗಳಿಗಾಗಿ ಹುಡುಕಲು ಕಷ್ಟಪಡುತ್ತಿರುವುದನ್ನು ನಾನು ಗಮನಿಸಿದೆ. ಅದೇ ಅವರ ಪಕ್ಕದಲ್ಲಿ ವೀಡಿಯೊ ಕಾಲ್​ನಲ್ಲಿದ್ದ ಶ್ರೀಮಂತ ಯುವತಿಯೊಬ್ಬಳು ಉಚಿತವಾಗಿ ಪ್ರಯಾಣಿಸುತ್ತಿರುವುದನ್ನು ಕೂಡ ನಾನು ನೋಡಿದೆ. ಇದು ನ್ಯಾಯವೇ?

4. ರಾಜ್ಯದ ಬೊಕ್ಕಸದಲ್ಲಿ ಹೆಚ್ಚುವರಿ ಆದಾಯವಿದ್ದರೆ, ಈ 20 ಪುರುಷರಿಗೂ ಅದನ್ನು ಏಕೆ ಉಚಿತಗೊಳಿಸಬಾರದು? ವಿಮಾನ ನಿಲ್ದಾಣ ಶಟಲ್ ಸೇವೆಯಂತಹ ಸಾರ್ವತ್ರಿಕ ಸೇವೆಗಳಲ್ಲಿ ನೀಡುವ ಉಚಿತ ಇಲ್ಲಿಯೂ ಅನ್ವಯವಾಗುವಂತೆ ಮಾಡಿ.

5. ಪ್ರಪಂಚದಾದ್ಯಂತ, ಸಹಾಯಧನ ಮತ್ತು ಇತರೆ ಸೌಲಭ್ಯಗಳನ್ನು ಭರಿಸಲಾಗದವರಿಗೆ ನೀಡಲಾಗುತ್ತದೆ. ಆದರೆ, ಬೆಂಗಳೂರು ಮತ್ತು ಮೈಸೂರಿನಂತಹ ಎರಡು ಶ್ರೀಮಂತ ನಗರಗಳ ಮಹಿಳೆಯರು ಉಚಿತ ಬಸ್​​ ಪ್ರಯಾಣ ಲಭ್ಯವಿದೆ ಎಂಬ ಕಾರಣಕ್ಕೆ ಪ್ರಯಾಣಿಸುತ್ತಿದ್ದಾರೆ. ಇದು ಸುಸ್ಥಿರವೇ?

6. ಇದೇ ಉಚಿತ ಹಣವನ್ನು ಕಸ ವಿಲೇವಾರಿ, ನಗರಗಳಲ್ಲಿನ ಗುಂಡಿಗಳನ್ನು ಸರಿಪಡಿಸಲು ಹಾಗೂ ರೈತರಿಗೆ ನೀರು ಪೂರೈಕೆ ಮಾಡಲು ಉಪಯೋಗಿಸಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ನೆಟ್ಟಿಗರ ಕೊಟ್ಟ ಪ್ರತಿಕ್ರಿಯೆ

ಪ್ರಯಾಣಿಕ ಕಿರಣ್ ಪ್ರಸ್ತಾಪಿಸಿದ ವಿಷಯವನ್ನು ಒಪ್ಪಿಕೊಂಡ ಬಹುತೇಕರು, ಉಚಿತಗಳನ್ನು ಎಲ್ಲರಿಗೂ ಅನ್ವಯಿಸುವ ಬದಲು ಅಗತ್ಯವಿರುವವರಿಗೆ ಕೊಡುವುದು ಒಳಿತು ಎಂದು ಒತ್ತಿ ಹೇಳಿದ್ದಾರೆ. ಓರ್ವ ಬಳಕೆದಾರರು, "ಉಚಿತ ಬಸ್ ಪ್ರಯಾಣವು ಪುರುಷರು ಅಥವಾ ಮಹಿಳೆಯರನ್ನು ಲೆಕ್ಕಿಸದೆ ಬಡವರಿಗಾಗಿ ಮೀಸಲಿಡಬೇಕು. ಎಲ್ಲರಿಗೂ ಅಲ್ಲ. ಆಗ ಅದಕ್ಕೊಂದು ಅರ್ಥ" ಎಂದಿದ್ದಾರೆ.

ಮತ್ತೊಬ್ಬರು, "ಚುನಾವಣೆಯ ಸಮಯದಲ್ಲಿ ಅವರು ಇಂಟರ್‌ಸಿಟಿ ಪ್ರಯಾಣವನ್ನು ಆಕರ್ಷಕವಾಗಿಸಲು ಬಯಸಿದ್ರೆ ಅದನ್ನು ಶೇ.25 ಅಥವಾ ಶೇ.50ರಷ್ಟು ರಿಯಾಯಿತಿಯಾಗಿ ಮಾಡಬಹುದು" ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಭಾರೀ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net