

King Cobra : ಕಾಳಿಂಗ ಸರ್ಪವನ್ನು ನೋಡಿದರೆ ಸಾಕು ಒಂದು ಕ್ಷಣ ಮೈಯೆಲ್ಲ ನಡುಗುತ್ತದೆ. ಭಯಕ್ಕೆ ಇನ್ನೊಂದು ಹೆಸರೇ ಕಾಳಿಂಗ ಸರ್ಪ. ತನ್ನ ಉದ್ದವಾದ ದೇಹ ಮತ್ತು ಸ್ಥಿರವಾದ ನೋಟದಿಂದಲೇ ಎಲ್ಲರನ್ನು ಭಯ ಬೀಳಿಸುತ್ತದೆ. ಎಡೆಯನ್ನು ಬಿಚ್ಚಿ 19 ಅಡಿ ಎತ್ತರದವರೆಗೂ ಭವ್ಯವಾಗಿ ನಿಲ್ಲುವ ಈ ಜಾತಿಯ ಹಾವು ತನ್ನ ಗಾಂಭೀರ್ಯತೆಯಿಂದಲೇ ಹಾವುಗಳ ರಾಜ ಎಂಬ ಬಿರುದನ್ನು ಪಡೆದುಕೊಂಡಿದೆ. ಈ ಕಾಳಿಂಗ ಸರ್ಪ ತೀವ್ರ ಸ್ವರೂಪದ ವಿಷ ಹೊಂದಿರುವ ಹಾವುಗಳಾಗಿದ್ದು, ಬಲು ಅಪಾಯಕಾರಿಯಾಗಿವೆ.
ಕಾಳಿಂಗ ಸರ್ಪ ಕೇವಲ ಒಂದೇ ಜಾತಿಯ ಹಾವು ಎಂದು ಇಲ್ಲಿಯವರೆಗೆ ನಂಬಲಾಗಿದೆ. ಇದು ಓಫಿಯೋಫಾಗಸ್ ಹನ್ನಾ ಕುಲಕ್ಕೆ ಸೇರಿದೆ ಎಂದು ಕಳೆದ 188 ವರ್ಷಗಳಿಂದ ನಂಬಲಾಗಿತ್ತು. ಆದರೆ, ಈಗ ನಾಲ್ಕು ಜಾತಿಯ ಕಾಳಿಂಗ ಸರ್ಪಗಳಿರುವುದು ಪತ್ತೆಯಾಗಿದೆ. ಕೊನೆಗೂ 188 ವರ್ಷದ ನಿಗೂಢ ರಹಸ್ಯ ಬಯಲಾಗಿದೆ.
ಹೌದು, ಕರ್ನಾಟಕದ ಆಗುಂಬೆಯಲ್ಲಿರುವ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿಯ ( Kalinga Centre for Rainforest Ecology in Agumbe ) ಸಂಶೋಧಕರು ಇಂಥದ್ದೊಂದು ಆವಿಷ್ಕಾರ ಮಾಡಿದ್ದಾರೆ. ಒಂದು ಕಾಲದಲ್ಲಿ ಒಂದೇ ಜಾತಿಯೆಂದು ಪರಿಗಣಿಸಲ್ಪಟ್ಟ ಕಾಳಿಂಗ ಸರ್ಪ, ನಾಲ್ಕು ವಿಭಿನ್ನ ಜಾತಿಗಳನ್ನು ಒಳಗೊಂಡಿದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. 2012ರಲ್ಲಿ ಪ್ರಾರಂಭವಾದ ಕಾಳಿಂಗ ಸರ್ಪ ಜಾತಿಗಳ ಅಧ್ಯಯನದಲ್ಲಿ, ನಿರ್ಣಾಯಕ ಆವಿಷ್ಕಾರ ಮಾಡಲಾಗಿದೆ.
2012 ರಿಂದ 2024 ರವರೆಗೆ 12 ವರ್ಷಗಳ ಸುದೀರ್ಘ ಅಧ್ಯಯನ ಮಾಡಲಾಗಿದೆ. ವಿಶ್ವದ ಅತಿದೊಡ್ಡ ವಿಷಕಾರಿ ಹಾವಿನ ಭೌತಿಕ ಲಕ್ಷಣಗಳು ಮತ್ತು ಅನುವಂಶಿಕ ಸಂಯೋಜನೆಯನ್ನು ವಿಸ್ತೃತವಾಗಿ ಪರಿಶೀಲಿಸಿ, ಪತ್ತೆಹಚ್ಚಲಾಗಿದೆ. ವೈವಿಧ್ಯಮಯ ಆವಾಸಸ್ಥಾನಗಳಲ್ಲಿ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದ್ದು, ಅವುಗಳು ಈ ಕೆಳಕಂಡಂತಿವೆ.
* ಓಫಿಯೋಫಾಗಸ್ ಕಾಳಿಂಗ ( Ophiophagus kaalinga ) : ಈ ಜಾತಿಯ ಹಾವು ನೈಋತ್ಯ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇದರ ದೇಹದಲ್ಲಿ 40ಕ್ಕಿಂತ ಕಡಿಮೆ ಪಟ್ಟಿಗಳಿವೆ.
* ಓಫಿಯೋಫಾಗಸ್ ಹನ್ನಾ ( Ophiophagus hannah ) : ಈ ಜಾತಿಯ ಹಾವು ಉತ್ತರ ಮತ್ತು ಪೂರ್ವ ಭಾರತ, ಅಂಡಮಾನ್ ದ್ವೀಪಗಳು, ಪೂರ್ವ ಪಾಕಿಸ್ತಾನ, ಇಂಡೋ-ಬರ್ಮಾ, ಇಂಡೋ-ಚೀನಾ ಮತ್ತು ಥೈಲ್ಯಾಂಡ್‌ನಲ್ಲಿ ವಾಸಿಸುತ್ತವೆ. ಈ ಹಾವುಗಳಲ್ಲಿ 50 ರಿಂದ 70 ಪಟ್ಟಿಗಳನ್ನು ಹೊಂದಿರುತ್ತವೆ.
* ಓಫಿಯೋಫಾಗಸ್ ಬಂಗರಸ್ ( Ophiophagus bungarus ): ಮಲಯ ಪೆನಿನ್ಸುಲಾ, ಗ್ರೇಟರ್ ಸುಂದಾ ದ್ವೀಪಗಳು ಮತ್ತು ದಕ್ಷಿಣ ಫಿಲಿಪೈನ್ಸ್‌ನ ಕೆಲವು ಭಾಗಗಳಲ್ಲಿ ಈ ಜಾತಿಯ ಹಾವುಗಳು ಕಂಡುಬರುತ್ತದೆ. ಇದು 70 ಕ್ಕೂ ಪಟ್ಟಿಗಳನ್ನು ಒಳಗೊಂಡಿದೆ.
* ಓಫಿಯೋಫಾಗಸ್ ಸಾಲ್ವತಾನ ( Ophiophagus salvatana ) : ಈ ಜಾತಿಯ ಹಾವು ಉತ್ತರ ಫಿಲಿಪೈನ್ಸ್‌ನ ಲುಝೋನ್ನಲ್ಲಿ ಕಂಡುಬರುತ್ತವೆ. ಈ ಜಾತಿಯು ತನ್ನ ದೇಹದಲ್ಲಿ ಯಾವುದೇ ಪಟ್ಟಿಗಳನ್ನು ಹೊಂದಿಲ್ಲ.
ಸಂಶೋಧನಾ ಮುಖ್ಯಸ್ಥೆ ಪಿ.ಗೌರಿ ಶಂಕರ್ ಮಾತನಾಡಿ, ಕಾಳಿಂಗ ಸರ್ಪದ ಬಹು ಜಾತಿಗಳ ಬಗ್ಗೆ ಅನೇಕ ಸಿದ್ಧಾಂತಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದನ್ನೂ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಇದೀಗ ನಮ್ಮ ತಂಡವು ಹಾವುಗಳು ಅಂಗಾಂಶ ಮಾದರಿಗಳನ್ನು ವಿಶ್ಲೇಷಿಸಿತು ಮತ್ತು ಅನೇಕ ಪ್ರದೇಶಗಳಲ್ಲಿನ ಮಾದರಿಗಳ ಫೋಟೋಗಳನ್ನು ತೆಗೆದುಕೊಂಡಿತು. ಅಲ್ಲದೆ, ಹಾವಿನ ಬಣ್ಣ ಮಾದರಿಗಳು, ಅದರ ಪಟ್ಟಿಗಳು ಅಥವಾ ಉಂಗುರುಗಳು, ಮಾಪಕಗಳು ಮತ್ತು ದೇಹದ ಅನುಪಾತಗಳಂತಹ ಗುಣಲಕ್ಷಣಗಳ ಮೇಲೆ ಕೇಂದ್ರೀಕರಿಸಿದೆ ಎಂದು ತಿಳಿಸಿದರು.
ಇನ್ನು ಈ ಅಧ್ಯಯನವು ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಸೇರಿದಂತೆ ಆಗ್ನೇಯ ಏಷ್ಯಾದಾದ್ಯಂತ ಹಿಮಾಲಯದ ತಪ್ಪಲಿನಲ್ಲಿ ಮತ್ತು ಪಶ್ಚಿಮ ಘಟ್ಟಗಳಿಂದ ಉಷ್ಣವಲಯದ ಮತ್ತು ಸಮಶೀತೋಷ್ಣ ವಲಯಗಳಿಗೆ ವ್ಯಾಪಿಸಿರುವ ಪ್ರದೇಶಗಳಲ್ಲಿ ಕಾಳಿಂಗ ಸರ್ಪಗಳನ್ನು ಪರೀಕ್ಷಿಸಿದೆ. ಈ ಹಾವುಗಳು ಈ ಹಿಂದೆ ಯೋಚಿಸಿದಂತೆ ಏಕರೂಪದ ಕುಲಕ್ಕಿಂತ ಸಂಕೀರ್ಣ ಜಾತಿಯ ಗುಂಪನ್ನು ಪ್ರತಿನಿಧಿಸುತ್ತವೆ ಎಂದು ಸಂಶೋಧಕರು ದೃಢಪಡಿಸಿದ್ದಾರೆ.
ಅಂದಹಾಗೆ ಕಾಳಿಂಗ ಸರ್ಪಗಳನ್ನು ಪ್ರಸ್ತುತ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್‌ನ (IUCN) ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್‌ನಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಗುರುತಿಸಲಾಗಿದೆ. ಈ ಹಾವುಗಳ ಆವಾಸಸ್ಥಾನದ ನಾಶ ಮತ್ತು ಅವುಗಳ ಚರ್ಮ, ಆಹಾರ, ಔಷಧ, ಮತ್ತು ಸಾಕುಪ್ರಾಣಿ ವ್ಯಾಪಾರಕ್ಕಾಗಿ ನಿರಂತರ ಶೋಷಣೆ ಅನುಭವಿಸುತ್ತಿದ್ದು, ಅವುಗಳ ಜೀವಕ್ಕೆ ಬೆದರಿಕೆ ಇದೆ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)