

ಒಮ್ಮೆ ಕೃಷ್ಣ-ಬಲರಾಮರು ವಿಹಾರಮಾಡುವ ಸಂದರ್ಭ. ಗೋಪಿಕಾಸ್ತ್ರೀಯರ ಜೊತೆಗೆ ಶ್ರೀಕೃಷ್ಣ ಬಲರಾಮರು ವಿಹಾರಮಾಡುತ್ತಿ ರುವಾಗ ಶಂಖಚೂಡ ಎಂಬ ಒಬ್ಬ ಯಕ್ಷ ಸ್ತ್ರೀಯರನ್ನು ಅಪಹರಣ ಮಾಡಿಕೊಂಡು ಹೊರಟಿದ್ದಾನೆ. ಈ ಶಂಖಚೂಡ ಕುಬೇರನ ಅನುಚರ. ಅವನು ಮಹಾದುಷ್ಟ. ರುದ್ರದೇವರನ್ನು ಕುರಿತು ತಪಸ್ಸು ಮಾಡಿ ವರ ಪಡೆದಿದ್ದ. ರುದ್ರದೇವರು ನೀಡಿದ ಆ ವರದಿಂದ ಮಹಾಸಾಮರ್ಥ್ಯವನ್ನು ಪಡೆದವನಾಗಿದ್ದ.
ಶ್ರೀಕೃಷ್ಣ ಶಂಖಚೂಡನನ್ನು ಬೆನ್ನು ಹತ್ತಿ ಹೋಗಿ ಅವನನ್ನು ಸಂಹಾರ ಮಾಡಿದ. ಹೆಣ್ಣು ಮಕ್ಕಳನ್ನು ಅಪಹರಿಸುವ, ಹೆಣ್ಣು ಮಕ್ಕಳನ್ನು ವಿನಾಕಾರಣ ಚುಡಾಯಿಸುವ, ಕೆಟ್ಟ ಕೆಟ್ಟ ಮಾತುಗಳಿಂದ ಅವರ ಮನಸ್ಸನ್ನು ನೋಯಿಸುವ ವಿಕೃತ ಮನಸ್ಸಿನ ದುಷ್ಟರನ್ನು ಶ್ರೀಕೃಷ್ಣ ಪರಮಾತ್ಮ ಸುಮ್ಮನೆ ಬಿಡುವುದಿಲ್ಲ ಎನ್ನುವ ಸಂದೇಶವನ್ನು ಈ ಮೂಲಕ ಇಡೀ ಜಗತ್ತಿಗೆ ತಿಳಿಸಿದ್ದಾನೆ. ಶಂಖಚೂಡ ಅಲ್ಲಿ ಸತ್ತು ಬಿದ್ದಿದ್ದಾನೆ. ಶಂಖಚೂಡ ಎಂಬ ಈ ಯಕ್ಷನ ತಲೆಯ ಮೇಲೆ ಒಂದು ಅಮೂಲ್ಯವಾದ ರತ್ನ ಇತ್ತು. ಹೇಗೆ ಅಶ್ವತ್ಥಾಮಾಚಾರ್ಯರ ಹಣೆಯ ಮೇಲೆ ಒಂದು ರತ್ನ ಇತ್ತೋ ಹಾಗೆ.
ಭೀಮಸೇನದೇವರು ಅಶ್ವತ್ತಾಮಾಚಾರ್ಯರನನ್ನು ಸೋಲಿಸಿ ಹೇಗೆ ಅವನ ತಲೆಯ ಮೇಲೆ ಇರುವ ಮಣಿಯನ್ನು ಪಡೆದರೋ ಹಾಗೆ ಶ್ರೀಕೃಷ್ಣನು ಶಂಖಚೂಡನನ್ನು ಕೊಂದು ಅವನ ತಲೆಯ ಮೇಲೆ ಇರುವ ಮಣಿಯನ್ನು ಪಡೆದು ಬಲರಾಮನಿಗೆ ಕೊಟ್ಟಿದ್ದಾನೆ. ಮಣಿಯನ್ನು ಪಡೆದ ಶ್ರೀಕೃಷ್ಣ ಅದನ್ನೇಕೆ ಬಲರಾಮನಿಗೆ ಕೊಟ್ಟ? ಅದೇಕೆಂದು ವಾದಿರಾಜಸ್ವಾಮಿಗಳು ವಿಶ್ಲೇಷಿಸಿದ್ದಾರೆ. ಅದು ಈ ರೀತಿ ಹೀಗಿದೆ: ಶಂಖಚೂಡನನ್ನು ಕೊಂದದ್ದರಿಂದ ಬರಬೇಕಾದ ಕೀರ್ತಿ ಶ್ರೀಕೃಷ್ಣನಿಗೆ ಬಂದಾಗಿದೆ. ಶತ್ರು ಸಂಹಾರವೆಂಬ ಮಣಿಯನ್ನು ನಾನು ಧರಿಸಿ ಆಗಿದೆ. ಶಂಖಚೂಡನೆಂಬ ದುಷ್ಟನನ್ನು ಕೊಂದ ಕೀರ್ತಿ ನನಗೆ ಬಂದ ಮೇಲೆ ಅವನ ತಲೆಯ ಮೇಲೆ ಇರುವ ರತ್ನ ಅಣ್ಣನಾದ ಬಲರಾಮನಿಗೆ ಇರಲಿ ಎಂದು ಭಾವಿಸಿ ಶ್ರೀಕೃಷ್ಣ ಆ ರತ್ನವನ್ನು ಬಲರಾಮನಿಗೆ ಕೊಟ್ಟಿದ್ದಾನೆ.