

ಬೆಂಗಳೂರು: ನಿರ್ಮಾಣ ಹಂತದ ಕಟ್ಟದಲ್ಲಿ ಮಲಗುವ ಜಾಗದ ವಿಚಾರಕ್ಕೆ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಗಿರಿನಗರದ ಈರಣ್ಣನಗುಡ್ಡೆ ಕಸ್ತೂರಿ ಬಾ ಕಾಲನಿ ನಿವಾಸಿ ಹರೀಶ್ ಅಲಿಯಾಸ್ ಅಮಾವಾಸೆ (38) ಬಂಧಿತ. ಸೆ.24ರ ಮಧ್ಯಾಹ್ನ ಶ್ರೀನಗರದ 11ನೇ ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದ 3ನೇ ಮಹಡಿಯಲ್ಲಿ ಅಜಿತ್ (27) ಎಂಬ ಕಾರ್ಮಿಕನ ತಲೆ ಮೇಲೆ ಹಾಲೋ ಬ್ರಿಕ್ಸ್ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಅಜಿತ್, 6 ತಿಂಗಳಿಂದ ನಗರದ ಮುನೇಶ್ವರ ಬ್ಲಾಕ್‌ನಲ್ಲಿ ಚಿಕ್ಕ ಮನೆಯಲ್ಲಿ ನೆಲೆಸಿದ್ದ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವ ಸ್ಥಳಗಳಲ್ಲೇ ರಾತ್ರಿ ಮಲಗುತ್ತಿದ್ದ. ತುಮಕೂರಿನ ಕೊರಟಗೆರೆ ಮೂಲದ ಹರೀಶ್, ಗಿರಿನಗರದ ಈರಣ್ಣನಗುಡ್ಡೆ ಕಸ್ತೂರಿ ಬಾ ಕಾಲನಿಯಲ್ಲಿ ನೆಲೆಸಿದ್ದ. ಈತ ಕೂಡ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ಕೆಲಸ ಮಾಡುವ ಸ್ಥಳದಲ್ಲೇ ಮಲಗುತ್ತಿದ್ದ.
ಸೆ.24ರಂದು ಶ್ರೀನಗರದ ಡಾ.ನರೇಂದ್ರ ಕುಮಾರ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಜಿತ್ ಮತ್ತು ಹರೀಶ್ ಕೆಲಸ ಮಾಡುತ್ತಿದ್ದರು. ಇಬ್ಬರೂ ಮಧ್ಯಾಹ್ನ ಮದ್ಯ ಸೇವಿಸಿದ್ದರ. ಅಜಿತ್ ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತು ಊಟ ಮಾಡುವಾಗ, ಅಲ್ಲಿಗೆ ಬಂದಿರುವ ಹರೀಶ್, ಇಲ್ಲಿ ನಾನು ಕುಳಿತು ಕೊಳ್ಳಬೇಕು ಎಂದಿದ್ದಾನೆ. ಅಜಿತ್ ಮೇಲೆ ಎದ್ದು ಮೂರನೇ ಮಹಡಿಗೆ ತೆರಳಿ ಊಟಕ್ಕೆ ಕುಳಿತ್ತಿದ್ದ. ಅಲ್ಲಿಗೂ ಬಂದಿರುವ ಹರೀಶ್, ಇಲ್ಲಿ ನಾನು ಮಲಗಬೇಕು. ಜಾಗದಿಂದ ಮೇಲೇಳು ಎಂದಿದ್ದಾನೆ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪಗೊಂಡ ಹರೀಶ್, ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ತೆಗೆದು ಅಜಿತ್ ತಲೆ ಮೇಲೆ ಎತ್ತಿಹಾಕಿ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವವಾಗಿ ಅಜಿತ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಸಂಬಂಧ ಹನುಮಂತನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.