ಹಣ ಡ್ರಾ ವೇಳೆ ಸೆರೆಸಿಕ್ಕ ಅಪಹರಣಕಾರರು

Principal Arrest
Published on

ಬೆಂಗಳೂರು: ಆಂಧ್ರಪ್ರದೇಶ ಉದ್ಯಮಿಯನ್ನು ಆತನ ಸ್ನೇಹಿತೆ ಮೂಲಕ ಕರೆಸಿಕೊಂಡು ಅಪಹರಣ ಮಾಡಿದ್ದ ಗ್ಯಾಂಗ್ ಕೋರಮಂಗಲ ಪೊಲೀಸರ ಸಮಯ ಪ್ರಜ್ಞೆಯಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದೆ.

ಆಂಧ್ರಪ್ರದೇಶದ ನೆಲ್ಲೂರು ಮೂಲದ ಮೋನಿಕಾ, ಹರೀಶ್, ಹರಿ ಕೃಷ್ಣ, ನರಸಿಂಹ, ಅಂಜೀನಪ್ಪ, ರಾಜು ಮತ್ತು ನರೇಂದ್ರ ಬಂಧಿತರು. ಆಂಧ್ರ ಮೂಲದ ಉದ್ಯಮಿ ಪೊತುಲ ಶಿವಾ ಎಂಬುವರನ್ನು ಆರೋಪಿಗಳ ಗ್ಯಾಂಗ್ ಅಪಹರಣ ಮಾಡಿಕೊಂಡು ಕೋರಮಂಗಲದ ಮಾಲ್‌ಯೊಂದರಲ್ಲಿನ ಎಟಿಎಂ ಬೂತ್‌ನಲ್ಲಿ ಹಣ ಡ್ರಾ ಮಾಡಿಸುತ್ತಿದ್ದರು. ಉದ್ಯಮಿ ಪ್ರತಿರೋಧ ವ್ಯಕ್ತಪಡಿಸಿದಾಗ ಸಣ್ಣ ಜಟಾಪಟಿ ನಡೆದಿತ್ತು. ಅದೇ ವೇಳೆಗೆ ಗಸ್ತಿನಲ್ಲಿದ್ದ ಸಬ್‌ಇನ್‌ಸ್ಪೆಕ್ಟರ್ ಮಾದೇಶ್ ನೇತೃತ್ವದ ತಂಡ ಉದ್ಯಮಿಯನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 17ರಂದು ಆರೋಪಿ ಮೋನಿಕಾ, ತನ್ನ ಸ್ನೇಹಿತ ಉದ್ಯಮಿಗೆ ಕರೆ ಮಾಡಿ ಪೆನಗೊಂಡಕ್ಕೆ ಕರೆಸಿಕೊಂಡು ಅಲ್ಲಿಂದ ಪಾವಗಡಕ್ಕೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು.

ಅಲ್ಲಿಗೆ ಬಂದಾಗ ಪಾವಗಡ ಹೆದ್ದಾರಿಯಲ್ಲಿ ಮತ್ತೊಂದು ಕಾರಿನಲ್ಲಿ ಬಂದ ಇತರ ಆರೋಪಿಗಳು ಏಕಾಏಕಿ ಕಾರು ತಡೆದು ಉದ್ಯಮಿಯನ್ನು ಮತ್ತೊಂದು ಕಾರಿಗೆ ಕೂರಿಸಿಕೊಂಡು ಅಪಹರಣ ಮಾಡಿದ್ದರು. ಅದೇ ವೇಳೆ ಉದ್ಯಮಿ ಮೈಮೇಲಿದ್ದ 4.20 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಕಿತ್ತುಕೊಂಡು 10 ಲಕ್ಷ ರೂ. ನೀಡುವಂತೆ ಒತ್ತಾಯ ಮಾಡಿದ್ದರು. ಕೊನೆಗೆ ಐದು ಲಕ್ಷ ರೂ. ಕೊಡಲು ಒಪ್ಪಿಕೊಂಡು ತನ್ನ ಉದ್ಯಮಿ ಕಡೆಯಿಂದ ಆತನ ಸ್ನೇಹಿತ ಕೃಷ್ಣ ಎಂಬಾತನಿಗೆ ಕರೆ ಮಾಡಿಸಿ ಎಟಿಎಂ ಕಾರ್ಡ್‌ಗಳನ್ನು ಮೆಜೆಸ್ಟಿಕ್‌ಗೆ ತರಿಸಿಕೊಂಡಿದ್ದರು. ನ.20ರಂದು ಮೆಜೆಸ್ಟಿಕ್‌ಗೆ ಬಂದು ಎಟಿಎಂ ಕಾರ್ಡ್‌ಗಳನ್ನು ಪಡೆದು ಮತ್ತೆ ಕೋರಮಂಗಲಕ್ಕೆ ಹೋಗಿ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಮಾಲ್‌ನಲ್ಲಿನ ಎಟಿಎಂನ್‌ನಲ್ಲಿ ಹಣ ಡ್ರಾ ಮಾಡಲು ಒಳ ಹೋಗಿದ್ದರು.

ಅಲ್ಲಿ ಉದ್ಯಮಿ ಪ್ರತಿರೋಧ ವ್ಯಕ್ತಪಡಿಸಿ ಆರೋಪಿಗಳ ಜತೆಗೆ ಜಟಾಪಟಿ ನಡೆಸಿದ್ದರು. ಅದೇ ವೇಳೆಗೆ ಗಸ್ತು ಪೊಲೀಸರು ಬಂದಾಗ ಇಬ್ಬರು ಆರೋಪಿಗಳು ನೋಡಿ ಅಲ್ಲಿಂದ ಓಡಿ ಹೋಗಿದ್ದರು. ಅನುಮಾನಗೊಂಡ ಪೊಲೀಸರು ತಕ್ಷಣ ಉದ್ಯಮಿ ಮತ್ತು ಇತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಸ್ಥಳದಲ್ಲಿ ಸಿಕ್ಕ ಆರೋಪಿಗಳ ಮಾಹಿತಿ ಮೇರೆಗೆ ಇತರ ತಲೆಮರೆಸಿಕೊಂಡವರನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net