

ಬೆಂಗಳೂರು: ಪೊಲೀಸರ ವಿರುದ್ಧವೇ ಕಿಡ್ನ್ಯಾಪ್ ಹಾಗೂ ಬ್ಲ್ಯಾಕ್ಮೇಲ್ ದೂರು ನೀಡಲಾಗಿದ್ದು, ಕಮಿಷನರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಂತೆ ಆರೋಪಿಗಳಲ್ಲಿ ಒಬ್ಬನಾಗಿರುವ ಹೆಡ್ಕಾನ್ಸ್ಟೆಬಲ್ ಬಂಧನವಾಗಿದೆ. ಮತ್ತೊಂದೆಡೆ ಇನ್ನೊಬ್ಬ ಆರೋಪಿಯಾಗಿರುವ ಸಬ್ ಇನ್ಸ್ಪೆಕ್ಟರ್ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.
ಹುಲಿ ಉಗುರು ಹಾಗೂ ಚರ್ಮವನ್ನು ಮಾರಾಟ ಮಾಡುತ್ತಿದ್ದವನನ್ನು ಶನಿವಾರ ಕರೆದೊಯ್ದಿದ್ದ ಪೊಲೀಸರು ನಂತರ ಆತನ ಕಡೆಯವರಿಗೆ ಕರೆ ಮಾಡಿ 40 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಾರತಹಳ್ಳಿ ಠಾಣೆ ಪಿಎಸ್ಐ ರಂಗೇಶ್ ಹಾಗೂ ಹೆಡ್ ಕಾನ್ಸ್ಟೆಬಲ್ ಹರೀಶ್ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಆರೋಪಿಯನ್ನು ಕರೆದೊಯ್ದಿದ್ದಲ್ಲದೆ ಆತನ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಆತನ ಕಡೆಯವರಿಗೆ ಕರೆ ಮಾಡಿಸಿದ್ದಾಗಿ ದೂರು ನೀಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಆರೋಪಿ ಪೊಲೀಸರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ ಹೆಡ್ ಕಾನ್ಸ್ಟೆಬಲ್ ಹರೀಶ್ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಪರಾರಿಯಾದ ಎಸ್ಐ ರಂಗೇಶ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ.