

ಜೈಪುರ: ಇದೊಂದು ಮನಕಲಕುವ, ಹೃದಯ ವಿದ್ರಾವಕ ಘಟನೆ ಎಂದರೆ ಖಂಡಿತ ತಪ್ಪಾಗಲಾರದು. ಪ್ರಾಯಶಃ ಸಿನಿಮಾದಲ್ಲಿ ಇಂತಹ ಸನ್ನಿವೇಶಗಳನ್ನು ನೋಡಿರುತ್ತೇವೆಯೇ ಹೊರತು ನಿಜ ಜೀವನದಲ್ಲಿ ಕಾಣುವುದಿರಲಿ, ಕೇಳಿಯೂ ಇರುವುದಿಲ್ಲ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪೋಷಕರಿಂದ ಮಗುವನ್ನು ಬೇರ್ಪಡಿಸುವ ಕಳ್ಳರು, ಹಣದ ಆಸೆಯಿಂದಲೋ ಅಥವಾ ದ್ವೇಷದ ಕಾರಣವೋ ಕಿಡ್ನ್ಯಾಪ್ ಮಾಡಿ, ಹೆತ್ತವರ ಕಣ್ಣೀರಿಗೆ ಕಾರಣರಾಗುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕೂಡ ಅದೇ ರೀತಿಯಲ್ಲಿ ಎರಡು ವರ್ಷದ ಪುಟ್ಟ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದು, 14 ತಿಂಗಳು ಮಗುವನ್ನು ತನ್ನ ಜತೆಯಲ್ಲೇ ಇರಿಸಿಕೊಂಡಿದ್ದ ಘಟನೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ರಾಜಸ್ಥಾನದ ಜೈಪುರ ಪೊಲೀಸರು ಪೃಥ್ವಿ ಎಂಬ ಎರಡು ವರ್ಷದ ಮುಗ್ಧ ಮಗುವನ್ನು ತನ್ನೊಂದಿಗೆ ಹೊತ್ಯೊಯ್ದು, ಉತ್ತರಪ್ರದೇಶದ ಊರಾಚೆಗಿನ ಪುಟ್ಟ ಹಟ್ಟಿಯಲ್ಲಿ ವಾಸವಾಗಿದ್ದನ್ನು. ನಿರಂತರ ಕಾರ್ಯಾಚರಣೆಯಲ್ಲಿ ಆತನನ್ನು ತಪ್ಪಿಸಿಕೊಳ್ಳದಂತೆ ಲಾಕ್ ಮಾಡಿದ ಪೊಲೀಸರ ತಂಡ, ಕಡೆಗೂ ಆರೋಪಿಯನ್ನು ಬಂಧಿಸಿ, ಆತನಿಂದ ಮಗುವನ್ನು ಕರೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ, ಈ ವೇಳೆ 14 ವರ್ಷದಿಂದ ಜತೆಗಿದ್ದ ವ್ಯಕ್ತಿಯನ್ನು ಕಳೆದುಕೊಳ್ಳಲು ಇಷ್ಟಪಡದ ಕಂದಮ್ಮ ತಾಯಿಯ ಬಳಿ ಹೋಗದೆ, ಆತನನ್ನೇ ಬಿಗಿಯಾಗಿ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದೆ.
ಆರೋಪಿಯಿಂದ ಮಗುವನ್ನು ಬಲವಂತವಾಗಿ ಬಿಡಿಸಿಕೊಂಡ ಪೊಲೀಸರು, ತಾಯಿಗೆ ಹಸ್ತಾಂತರಿಸಿದ್ದಾರೆ. ಆದ್ರೆ, ಸ್ವಂತ ಅಮ್ಮನನ್ನೇ ಪರಿಗಣಿಸದ ಮಗು, ಅಳುವುದನ್ನು ಬಿಡದೆ, ಆತನ ಬಳಿ ಕೈ ತೋರಿಸುತ ಚೀರಾಡಿದೆ. ತನ್ನನ್ನು ಬಿಡದ ಪೃಥ್ವಿಯನ್ನು ಕಂಡು ತಾನು ಕಣ್ಣೀರಿಟ್ಟ ಆರೋಪಿ, ಪೊಲೀಸ್ ಅಧಿಕಾರಿಯೊಬ್ಬರ ಆದೇಶದಂತೆ ಜೀಪು ಹತ್ತಿ ಠಾಣೆಗೆ ಹೋಗಿದ್ದಾನೆ. ವರದಿಗಳ ಪ್ರಕಾರ, ಆರೋಪಿಯು ಉತ್ತರಪ್ರದೇಶದ ವೃಂದಾವನದ ಪರಿಕ್ರಮ ಮಾರ್ಗದ ಯಮುನಾ ನದಿಯ ಬಳಿಯ ಖಾದರ್ ಪ್ರದೇಶದಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ಸನ್ಯಾಸಿಯಾಗಿ ವಾಸಿಸುತ್ತಿದ್ದ. ತನ್ನ ಗುರುತನ್ನು ಮರೆಮಾಚಲು ಗಡ್ಡ ಮತ್ತು ಉದ್ದನೆಯ ಕೂದಲನ್ನು ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಅಸಲಿಗೆ ಇಲ್ಲಿ ಆತನ ಉದ್ದೇಶವೇನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದ್ರೆ, ಅಚ್ಚರಿ ಮೂಡಿಸುವ ಸಂಗತಿ ಏನೆಂದರೆ ಆರೋಪಿ ತನುಜ್ ಮಗುವಿನ ತಾಯಿಯ ಸಂಬಂಧಿ ಎಂದು ಹೇಳಲಾಗಿದೆ. ಚಾಣಾಕ್ಷನಾಗಿದ್ದ ಆರೋಪಿ ತನುಜ್, ಯಾರ ಬಳಿಯೂ ತನ್ನ ಪರಿಚಯವನ್ನು ಮಾಡಿಕೊಳ್ಳದೆ, ತನ್ನ ಗುರುತನ್ನು ಕೆಲವೊಮ್ಮೆ ಬಿಳಿ ಗಡ್ಡ ಬೆಳೆಸಿ ನಂತರ ಅದೇ ಬಿಳಿ ಗಡ್ಡಕ್ಕೆ ಬಣ್ಣ ಹಚ್ಚಿಕೊಂಡು ಮರೆಮಾಚುತ್ತಿದ್ದನು ಎನ್ನಲಾಗಿದೆ. ಪೃಥ್ವಿ ತನ್ನ ಸ್ವಂತ ಮಗನೆಂದು ಸುತ್ತಮುತ್ತಲಿನ ಜನರಿಗೆ ಆತ ಪರಿಚಯಿಸಿದ್ದ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).