3500 ವರ್ಷ ಹಳೆಯ ಜಾರ್​​ ಛಿದ್ರಗೊಳಿಸಿದ ಬಾಲಕ! ಮ್ಯೂಸಿಯಂ ಅಧಿಕಾರಿಯ ಮಾತಿಗೆ ಪೋಷಕರೇ ಗಪ್​ಚುಪ್​

ವಿಜಯವಾಣಿ (63)
Published on

ಇಸ್ರೇಲ್​: ವಸ್ತು ಸಂಗ್ರಹಾಲಯ ಅಂದಮೇಲೆ ಅಲ್ಲಿ ಪುರಾತನ ವಸ್ತುಗಳ ಪ್ರದರ್ಶನಕ್ಕೆ ಮೊದಲ ಆದ್ಯತೆ. ಆಯಾ ದೇಶದ ಹಳೆಯ ನಾಣ್ಯ, ರಾಜರು ಬಳಸುತ್ತಿದ್ದ ವಸ್ತುಗಳು ಸೇರಿದಂತೆ ಹಲವು ಕುತೂಹಲಕಾರಿ ವಿಷಯಗಳು ಇಲ್ಲಿ ಕಾಣಲು ಸಿಗುತ್ತವೆ. ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ವಸ್ತುಗಳನ್ನು ಸ್ಪರ್ಶಿಸಲು ಮತ್ತು ಅದರ ಬಗ್ಗೆ ತಿಳಿದುಕೊಳ್ಳುವ ಉತ್ಸಾಹದಲ್ಲಿ ಕೆಲವರು ಅದನ್ನು ಮುಟ್ಟುವ ಪ್ರಯತ್ನ ಮಾಡ್ತಾರೆ. ಹೀಗಾಗಿಯೇ ಅಲ್ಲಿನ ಜಿಲ್ಲಾಡಳಿತಗಳು ದಯವಿಟ್ಟು ಈ ಗಾಜಿನ ಮೇಲೆ ಸ್ಪರ್ಶಿಸಬೇಡಿ ಅಥವಾ ಇದನ್ನು ಮುಟ್ಟುಬೇಡಿ ಎಂಬ ಎಚ್ಚರಿಕೆ ಫಲಕ ಹಾಕಿರುತ್ತಾರೆ. ಈ ನಿಯಮ ಮೀರಿದರೆ ದಂಡವನ್ನು ವಿಧಿಸಲಾಗುತ್ತದೆ.

ಅನೇಕರು ಇಂತಹ ಎಡವಟ್ಟು ಮಾಡಿಕೊಂಡು ಮ್ಯೂಸಿಯಂ ಅಧಿಕಾರಿಗಳಿಂದ ದಂಡ ಸ್ವೀಕರಿಸಿದ್ದಾರೆ. ಅದಕ್ಕೆ ಹಲವು ನಿದರ್ಶನಗಳು ಇವೆ. ಸದ್ಯ ಇಲ್ಲೊಬ್ಬ ಪುಟ್ಟ ಪೋರ ತನ್ನ ಪೋಷಕರೊಡನೆ ಇಸ್ರೇಲ್​ನ ಹೈಫಾದಲ್ಲಿರುವ ಪುರಾತನ ವಸ್ತು ಸಂಗ್ರಹಾಲಯಕ್ಕೆ ಆಗಮಿಸಿದ್ದು, 3500 ವರ್ಷ ಹಳೆಯ ಮಡಿಕೆಯೊಂದನ್ನು ನೋಡುವಾಗ ಕೈತಪ್ಪಿ ನೆಲಕ್ಕೆ ಬೀಳಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಮ್ಯೂಸಿಯಂ ಅಧಿಕಾರಿಗಳನ್ನು ಕಂಡು ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

3500 ವರ್ಷಗಳಷ್ಟು ಹಳೆಯ ಕಂಚಿನ ಜಾರ್​ ಬಹಳ ವಿಶೇಷವಾದ ವಸ್ತುವಾಗಿದ್ದು, ಇದನ್ನು ಪುಡಿ ಪುಡಿ ಮಾಡಿದ ಬಾಲಕ ಅಧಿಕಾರಿಗಳ ಆಗಮನ ಕಂಡು ನಿಂತಲ್ಲೇ ಅಳಲು ಪ್ರಾರಂಭಿಸಿದ್ದಾನೆ. ತಕ್ಷಣವೇ ಆತನ ಪೋಷಕರು ಕ್ಷಮಿಸಿ ಸರ್​, ದಂಡ ಕೊಡ್ತೀವಿ ಎಂದು ಮನವಿ ಮಾಡಿದ್ದಾರೆ. ಆದ್ರೆ, ಅಧಿಕಾರಿಗಳ ನಡೆ ಅಲ್ಲಿದ್ದ ಪ್ರವಾಸಿಗರನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿತು. ಸಂಗ್ರಹಾಲಯವು ಸಮಾಧಿಯಲ್ಲ. ಇದು ಕೂಡ ವಾಸಿಸುವ ಸ್ಥಳ. ನೀವು ಭಯಪಡಬೇಡಿ. ಈ ರೀತಿಯ ಘಟನೆಗಳು ಸಂಭವಿಸುವುದು ಸಾಮಾನ್ಯ. ನಾವಿದನ್ನು ಸರಿಪಡಿಸಿ ಹಿಂತಿರುಗಿಸುತ್ತೇವೆ ಬೇಸರಗೊಳ್ಳಬೇಡಿ ಎಂದು ಮ್ಯೂಸಿಯಂ ಮುಖ್ಯಸ್ಥರು ಇನ್ಬಾಲ್ ರಿವ್ಲಿನ್ ತಿಳಿಸಿದ್ದಾರೆ.

ಬಾಲಕನನ್ನು ಸಮಾಧಾನಪಡಿಸಿ, ಆತನ ತಂದೆಗೆ ಈ ಮಾತುಗಳನ್ನು ಹೇಳಿದ ಮ್ಯೂಸಿಯಂ ಅಧಿಕಾರಿಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net