680 ದಿನದ ಬಳಿಕ ಕಿಚ್ಚುಗುತ್ತಿ ಮಾರಮ್ಮನ ದರ್ಶನ!

sulavadi-kichchugutti maramma
Published on

ಹನೂರು: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ 2018ರ ಡಿ.14ರಂದು ನಡೆದ ವಿಷ ಪ್ರಸಾದ ಪ್ರಕರಣದಿಂದಾಗಿ ನಿರ್ಬಂಧಿಸಿದ್ದ ದೇವರ ದರ್ಶನವನ್ನು 680 ದಿನಗಳ ಬಳಿಕ ತೆರವುಗೊಳುತ್ತಿದ್ದು, ಇಂದು(ಶನಿವಾರ) ಮಧ್ಯಾಹ್ನ 12.30ಕ್ಕೆ ಬಂಧ ಮುಕ್ತ ಕಿಚ್ಚುಗುತ್ತಿ ಮಾರಮ್ಮನ ಕಣ್ತುಂಬಿಕೊಳ್ಳುವ ಭಾಗ್ಯ ಭಕ್ತರಿಗೆ ದೊರೆತಿದೆ.

2018ರ ಡಿ.14ರಂದು ನಡೆದಿದ್ದ ದೇಗುಲದ ರಾಜಗೋಪುರ ಉದ್ಘಾಟನೆ ಪೂಜಾ ಕಾರ್ಯದಲ್ಲಿ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಇದನ್ನು ಸೇವಿಸಿದ್ದವರಲ್ಲಿ 12 ಜನರು ಮೃತಪಟ್ಟಿದ್ದರು. 120ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಈ ದುರಂತ ದೇವಸ್ಥಾನದ ಆವರಣದಲ್ಲಿ ಮಾರಣಹೋಮವನ್ನೇ ನಡೆಸಿತ್ತು.‌ ಅಂದಿನಿಂದ ದೇಗುಲ ಬಂದ್ ಮಾಡಲಾಗಿತ್ತು. ಇಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ದೊರೆತಿದೆ.

ಹಲವು ವರ್ಷಗಳ‌ ಬಳಿಕ ಮನೆ ದೇವರ ದರ್ಶನ ಸಿಗುತ್ತಿರುವ ಸಂತಸದಲ್ಲಿರುವ ಭಕ್ತರಿದ್ದಾರೆ. ದೇವಸ್ಥಾನದ ಆವರಣದಲ್ಲಿ ಸುಳವಾಡಿ ಸುತ್ತಮುತ್ತಲಿನ ಗ್ರಾಮ ಜನರು ನೆರೆದಿದ್ದಾರೆ. ಅ.21ರಿಂದ ದೇಗುಲದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದೆ‌. ಹೋಮ ಕಾರ್ಯಗಳು ಪೂರ್ಣಗೊಳ್ಳುತ್ತಿದ್ದು, ಭಕ್ತರಿಗೆ ದೇವಿ ದರ್ಶನ ಸಿಗಲಿದೆ.

ಮಾರಮ್ಮ ಬಂಧಿಯಾದ ದಿನದಿಂದ ಮಳೆ- ಬೆಳೆಯಾಗದೆ ಕಂಗಾಲಾಗಿದ್ದೇವೆ. ಆಕೆಗೆ ಪೂಜೆ ಮಾಡಿ ಗ್ರಾಮಕ್ಕೆ ಒಳಿತಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಭಕ್ತರೊಬ್ಬರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net