

ಬೆಂಗಳೂರು: ಚಿತ್ರದುರ್ಗ ಮೂಲಕ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 19 ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ದಿನ ಕಳೆದಂತೆ ಪ್ರಕರಣ ತೀವ್ರತೆ ಪಡೆದುಕೊಳ್ಳುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು ದರ್ಶನ್ ಚಿತ್ರರಂಗದಿಂದ ಬ್ಯಾನ್ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ಯಾನ್ ಮಾಡಲು ನಾವ್ಯಾರು ಕಾನೂನು ಅಲ್ಲ. ಕೇಸ್‌ನಿಂದ ಹೊರಗೆ ಬಂದ್ರೆ ಬ್ಯಾನ್ ಅನ್ನೋದು ಬರೋದೆ ಇಲ್ಲ. ಇಲ್ಲಿ ಬ್ಯಾನ್ ಅನ್ನೋದಕ್ಕಿಂತ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಕೆಲ ವಾರಗಳ ಹಿಂದೆಯಷ್ಟೇ ನನ್ನ ಮೇಲೂ ಬ್ಯಾನ್ ಎಂಬ ಕೂಗು ಕೇಳಿಬಂದಿತ್ತು. ಹಾಗಾಗಿ ಬ್ಯಾನ್ ಮಾಡೋದು ಮುಖ್ಯ ಅಲ್ಲ ನ್ಯಾಯ ಅನ್ನೋದು ಮುಖ್ಯ ಎಂದು ಹೇಳಿದ್ದಾರೆ.
ಪೊಲೀಸರು, ಮಾಧ್ಯಮಗಳು ಹೇಗೆ ಕೆಲಸ ಮಾಡ್ತಿವೆಕೋರ್ಟ್‌ನಲ್ಲಿ ಏನಾಗ್ತಿದೆ ಅನ್ನೋದರ ಬಗ್ಗೆ ಎಲ್ಲರೂ ದುರ್ಬೀನು ಹಾಕಿಕೊಂಡು ನೋಡ್ತಿದ್ದಾರೆ. ಗಮನ ಅಲ್ಲಿರಬೇಕು ಇಂತಹ ವಿಚಾರದಲ್ಲಿ ಪರ ವಿರೋಧ ಮಾತನಾಡುವುದು ತಪ್ಪಾಗುತ್ತದೆ. ಮುಖ್ಯವಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ, ಮಗುವಿಗೆ ನ್ಯಾಯ ಸಿಗಬೇಕು. ಬಾಳಿ ಬದುಕಬೇಕಾದ ರೇಣುಕಾಸ್ವಾಮಿ ಅವರಿಗೆ, ಮುಂದೆ ಹುಟ್ಟುವ ಅವರ ಮಗುವಿಗೆ ನ್ಯಾಯ ಸಿಗಬೇಕು. ನ್ಯಾಯದ ಮೇಲೆ ಜನರಿಗೆ ನಂಬಿಕೆ ಬರಬೇಕೆಂದರೆ, ಆರೋಪಿಗಳಿಗೆ ಶಿಕ್ಷೆ ಆಗಬೇಕಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಧ್ಯಮಗಳಲ್ಲಿ ಏನು ತೋರಿಸುತ್ತಿದ್ದೀರೋ ಅದರಿಂದಲೇ ನಾನು ತಿಳಿದುಕೊಳ್ಳುತ್ತಿದ್ದೇನೆ. ಸತ್ಯಾಂಶ ಹೊರತರಬೇಕು ಅನ್ನೋ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರು ಹಠ ಹಿಡಿದು ಕುಳಿತಿದ್ದಾರೆ ಅಂದ್ರೆ, ಎಲ್ಲರೂ ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಅರ್ಥ. ನಾನು ಅವರ ಪರ ಇವರ ಪರ ಮಾತಾಡೋದಿಲ್ಲ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ, ಅವ್ರ ಪತ್ನಿ, ಮಗುವಿಗೆ ನ್ಯಾಯ ಸಿಗಬೇಕು ಎಂದು ನಟ ಸುದೀಪ್ ಆಗ್ರಹಿಸಿದ್ದಾರೆ.