

ಬೆಂಗಳೂರು: ‘ಉಸಿರೇ ಉಸಿರೇ’ ಹಾಡಿಗೂ ನಟ ಕಿಚ್ಚ ಸುದೀಪ್ಗೂ ಅವಿನಾಭಾವ ಸಂಬಂಧ. ಅವರ ‘ಹುಚ್ಚ’ ಚಿತ್ರದ ‘ಉಸಿರೇ ಉಸಿರೇ’ ಹಾಡು ಹಿಟ್ ಆಗಿತ್ತು. ಬಳಿಕ ‘ಹೆಬ್ಬುಲಿ’ ಚಿತ್ರದಲ್ಲೂ ಮತ್ತೊಮ್ಮೆ, ಮತ್ತೊಂದು ‘ಉಸಿರೇ ಉಸಿರೇ’ ಸಾಂಗ್ ಸದ್ದು ಮಾಡಿತ್ತು. ಈಗ ಈ ಹಾಡಿನ ಸಾಲು ಸಿನಿಮಾ ಶೀರ್ಷಿಕೆಯಾಗಿದ್ದು, ಈ ಚಿತ್ರದಲ್ಲಿಯೇ ಕಿಚ್ಚ ಸುದೀಪ್ ನಟಿಸಲಿದ್ದಾರೆ.
ಪ್ಯಾನ್ ಇಂಡಿಯಾ ‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಪ್ರಶ್ನೆಗೆ ಇದೀಗ ‘ಉಸಿರೇ ಉಸಿರೇ’ ಮೂಲಕ ಉತ್ತರ ದೊರೆತಿದೆ. ಸದ್ಯ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡ ಸುದೀಪ್ರನ್ನು ಭೇಟಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಿಚ್ಚ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.
‘ಬಿಗ್ಬಾಸ್’ ಖ್ಯಾತಿಯ ರಾಜೀವ್ ‘ಉಸಿರೇ ಉಸಿರೇ’ ನಾಯಕನಾಗಿದ್ದು, ಅವರಿಗೆ ಶ್ರೀಜಿತ ನಾಯಕಿಯಾಗಿದ್ದಾರೆ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಂ, ಸಾಧು ಕೋಕಿಲ, ದೇವರಾಜ್, ಮಂಜು ಪಾವಗಡ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರವನ್ನು ಸಿ.ಎಂ. ವಿಜಯ್ ನಿರ್ದೇಶಿಸುತ್ತಿದ್ದು, ಮನು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ವಿವೇಕ್ ಚಕ್ರವರ್ತಿ ಸಂಗೀತವಿದೆ.