

ಬೆಂಗಳೂರು: 'ದಿಯಾ' ನಂತರ ಖುಷಿ ರವಿ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈ ಎರಡು ವರ್ಷಗಳಲ್ಲಿ ಅವರು ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೂ, ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ ಖುಷಿ ಇದೇ ಜನವರಿ 6ರಂದು ಹೆದರಿಸುವುದಕ್ಕೆ ಬರುತ್ತಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ‘ಗೂಢಾಚಾರಿ’ ಆಗಲು ಹೊರಟ ಅಡವಿ ಶೇಷ್ …
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಭರತ್, 'ಇಲ್ಲಿ ಭಯವನ್ನು ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದೇವೆ. ಧಾರವಾಡದ ನೂರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕಾಲೇಜ್ನಲ್ಲಿ ನಮ್ಮ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ದಾಂಡೇಲಿ ಅಭಯಾರಣ್ಯದಲ್ಲೂ ಚಿತ್ರೀಕರಣ ಮಾಡಿದ್ದೇವೆ. 'ವೀರ ಕೇಸರಿ' ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ನಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ರೀಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ' ಎಂದು ಮಾಹಿತಿ ಕೊಡುತ್ತಾರೆ.
ವಿವೇಕ್ ಸಿಂಹ ಇದಕ್ಕೂ ಮುನ್ನ 'ಚೂರಿಕಟ್ಟೆ' ಚಿತ್ರದಲ್ಲಿ ನಟಿಸಿದ್ದರು. ಆ ನಂತರ 'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲೂ ನಟಿಸಿದ್ದ ಅವರು, ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಇನ್ನು, ಈ ಚಿತ್ರದ ಬಗ್ಗೆ ಮಾತನಾಡುವ ಖುಷಿ, ''ದಿಯಾ" ಚಿತ್ರದಲ್ಲಿ ಎಲ್ಲರನ್ನೂ ಅಳಿಸಿದ್ದೆ. ಈ ಚಿತ್ರದಲ್ಲಿ ಭಯಪಡಿಸುತ್ತೇನೆ' ಎನ್ನುತ್ತಾರೆ.
'ಸ್ಪೂಕಿ ಕಾಲೇಜ್' ಚಿತ್ರದಲ್ಲಿ ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದು, ಮನೋಹರ್ ಜೋಷಿ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ. ಈ ಹಿಂದೆ 'ರಂಗಿ ತರಂಗ' ಚಿತ್ರವನ್ನು ನಿರ್ಮಿಸಿದ್ದ ಪ್ರಕಾಶ್ ಈ ಚಿತ್ರದ ನಿರ್ಮಾಪಕರು.