

ಚೆನ್ನೈ: ನಟಿ, ರಾಜಕಾರಣಿ ಖುಷ್ಬೂ ಅವರ ಟ್ವಿಟರ್ ಖಾತೆಯನ್ನು ಮತ್ತೊಮ್ಮೆ ಹ್ಯಾಕ್ ಮಾಡಲಾಗಿದೆ. ಇದಕ್ಕೂ ಮುನ್ನ 2020ರ ಏಪ್ರಿಲ್ ತಿಂಗಳಲ್ಲಿ ಹ್ಯಾಕ್ ಮಾಡಲಾಗಿತ್ತು. ಬಳಿಕ ಅಭಿಮಾನಿಗಳ ನೆರವಿನಿಂದ ಸರಿಪಡಿಸಿಕೊಂಡಿದ್ದರು. ಆದರೆ, ಈ ಬಾರಿ ಹ್ಯಾಕರ್ ಖುಷ್ಬೂ ಅವರ ಪ್ರೊಫೈಲ್ ಹೆಸರನ್ನು Briann ಎಂದು ಬದಲಾಯಿಸಿದ್ದಾನೆ.
ಕೇವಲ ಹೆಸರು ಮಾತ್ರವಲ್ಲ ಕವರ್ ಫೋಟೋ ಕೂಡ ಬದಲಾಗಿದೆ. ಅಲ್ಲದೆ, ನಟಿ ಮಾಡಿದಂತಹ ಎಲ್ಲ ಟ್ವೀಟ್ಸ್ ಮತ್ತು ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ. ಡಿಸ್ಪ್ಲೇ ಇಮೇಜ್ ಕೂಡ ಬದಲಾಗಿದೆ.
2020ರ ಏಪ್ರಿಲ್ನಲ್ಲಿ ಟ್ವಿಟರ್ ಹ್ಯಾಕ್ ಆಗಿದ್ದ ಸಂದರ್ಭದಲ್ಲಿ ಖುಷ್ಬೂ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ನೆರವು ಕೊರಿದ್ದರು. ನನ್ನ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಮೂರು ವಿವಿಧ ಲೊಕೇಶನ್ಗಳಿಂದ ಲಾಗಿನ್ ಆಗಲೂ ಪ್ರಯತ್ನ ನಡೆದಿದೆ, ನಿಮ್ಮ ಖಾತೆಯ ಪಾಸ್ವರ್ಡ್ ಅನ್ನು ಬದಲಾಯಿಸಿ ಎಂದು ಟ್ವಿಟರ್ ಹೇಳಿದೆ. ಆದರೆ, ನನಗೆ ಬದಲಾಯಿಸಲು ತಿಳಿಯುತ್ತಿಲ್ಲ. ಟ್ವಿಟರ್ ಹೇಳಿರುವುದು ಸಹ ಗೊತ್ತಾಗುತ್ತಿಲ್ಲ. ಹೀಗಾಗಿ ನನಗೆ ಯಾರಾದರೂ ಸಹಾಯ ಮಾಡಿ ಎಂದು ಖುಷ್ಬೂ ಅಭಿಮಾನಿಗಳ ನೆರವು ಕೋರಿದ್ದರು.
ಇದಾದ ಬಳಿಕ ಅಭಿಮಾನಿಗಳ ನೆರವಿನಿಂದಲೇ ತಮ್ಮ ಟ್ವಿಟರ್ ಖಾತೆಯನ್ನು ಖುಷ್ಬೂ ಮರಳಿ ಪಡೆದುಕೊಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ಹ್ಯಾಕ್ ಮಾಡಿದ್ದು, ಈ ಬಾರಿ ಇಡೀ ಖಾತೆಯನ್ನೇ ಬದಲಾಯಿಸಲಾಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಖುಷ್ಬೂ ಅವರು ರಜಿನಿಕಾಂತ್ ಅವರ ಮುಂದಿನ ಚಿತ್ರ ಅಣ್ಣಾತೆಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ಖುಷ್ಬೂ ರಜಿನಿಕಾಂತ್ ಪತ್ನಿಯ ಪಾತ್ರ ಮಾಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್)