

ಬೆಳಗಾವಿ: ಖರ್ಗೆ ಅವರು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂಬ ಮಾಣಿಪ್ಪಾಡಿ ಅವರ ಆರೋಪದ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar), “ಈ ವಿಚಾರವಾಗಿ ದಾಖಲೆ ಸಮೇತ ಸದನದಲ್ಲಿ ಚರ್ಚೆ ಮಾಡೋಣ” ಎಂದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದರು. ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿಲ್ಲ ಎಂಬ ಸ್ವಾಮೀಜಿಗಳ ಹೇಳಿಕೆ ಬಗ್ಗೆ ಕೇಳಿದಾಗ, ಸಿದ್ದರಾಮಯ್ಯ ಅವರು ಅನ್ಯಾಯ ಮಾಡಿಲ್ಲ. ಈ ವಿಚಾರವಾಗಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.
ಮಾಣಿಪ್ಪಾಡಿ ಅವರ ಆರೋಪ ಪ್ರಕರಣ ಸಿಬಿಐ ತನಿಖೆಗೆ ವಹಿಸುವಂತೆ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಮುಂದೆ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ಡಿಕೆಶಿ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಕರ್ನಾಟಕಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ ಎಂದ ಡಿಕೆ ಶಿವಕುಮಾರ್, ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗ ಗಂಗಾಧರ ದೇಶಪಾಂಡೆ ಹಾಗೂ ಜವಹಾರ್ ಲಾಲ್ ನೆಹರೂ ಅವರು ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ದೇಶಪಾಂಡೆ ಅವರು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸಲು ಆಹ್ವಾನ ನೀಡಿದ್ದರು.
ʼಗಾಂಧಿ ಭಾರತʼ ಕಾರ್ಯಕ್ರಮದ ಭಾಗವಾಗಿ ಅ. 2 ರಂದು ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ಹೆಜ್ಜೆ ಹಾಕಿದೆವು. ನಂತರ ಪಕ್ಷದ ವತಿಯಿಂದ ಗಾಂಧಿ ವೃತ್ತದಿಂದ ಭಾರತ ಜೋಡೋ ಭವನದವರೆಗೂ ಹೆಜ್ಜೆ ಹಾಕಲಾಗಿತ್ತು. ಈಗ ಮುಂದುವರಿದ ಭಾಗವಾಗಿ ಡಿ. 26 ರಂದು ಬೆಳಗಾವಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಎಲ್ಲ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಆಗಮಿಸಲಿದ್ದಾರೆ. ಮರುದಿನ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಪಂಚಾಯ್ತಿ ಸದಸ್ಯರು, ಸಮಿತಿ ಹಾಗೂ ನಿಗಮಗಳ ಸದಸ್ಯರು, ನಾಮನಿರ್ದೇಶಿತರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ.