ಕಾರ್ತಿಕ್ ಪುರೋಹಿತ್ ವಿಚಾರಣೆ ನಡೆಸಿದ ಖಾಕಿ

Darshan
Published on

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ೧೪ನೇ ಆರೋಪಿಯಾದ ಪ್ರದೂಷ್‌ನ ಸ್ನೇಹಿತನಾದ ಕಾರ್ತಿಕ್ ಪುರೋಹಿತ್‌ನನ್ನು ವಿಚಾರಣೆ ಮಾಡಿರುವ ಪೊಲೀಸರು ಆತನ ಹೇಳಿಕೆ ದಾಖಲಿಕೊಂಡಿದ್ದಾರೆ.
ನೋಟಿಸ್ ಹಿನ್ನೆಲೆಯಲ್ಲಿ ಶನಿವಾರ ತನಿಖಾಧಿಕಾರಿ ಎದುರು ಹಾಜರಾಗಿದ್ದ ಕಾರ್ತಿಕ್‌ನನ್ನು ಸುಮಾರು ಎರಡು ಗಂಟೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ರೇಣುಕಸ್ವಾಮಿ ಕೊಲೆ ನಡೆದ ಪಟ್ಟಣಗೆರೆಯ ಶೆಡ್‌ಗೆ ಆರೋಪಿ ಪ್ರದೋಷ್ ಜತೆಗೆ ಕಾರ್ತಿಕ್ ಪುರೋಹಿತ್ ಬಂದಿದ್ದರು. ಅಷ್ಟೇ ಅಲ್ಲದೇ ಇತರೆ ಆರೋಪಿಗಳ ಜತೆಗೂ ಕಾರ್ತಿಕ್‌ಗೆ ಒಡನಾಟ ಇದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ತಿಕ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿದ್ದ ಕಾರ್ತಿಕ್ ಬಳಿ ಕೊಲೆ ಘಟನೆ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಆರೋಪಿ ಪ್ರದೂಷ್ ಎಷ್ಟು ವರ್ಷಗಳಿಂದ ಪರಿಚಯ? ಘಟನೆ ದಿನ ಶೆಡ್‌ಗೆ ಬರಲು ಕಾರಣವೇನು? ಘಟನೆಯಲ್ಲಿ ನಿನ್ನ ಪಾತ್ರವೇನು? ರೇಣುಕಸ್ವಾಮಿ ಕೊಲೆ ಬಗ್ಗೆ ಮಾಹಿತಿ ಇತ್ತೇ? ಇತರೆ ಆರೋಪಿಗಳೊಂದಿಗೆ ಎಷ್ಟು ದಿನಗಳಿಂದ ಒಡನಾಟವಿದೆ. ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿಕ್ ಪುರೋಹಿತ್, ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದೆ. ಆರೋಪಿ ಪ್ರದೂಷ್ ನನ್ನ ಸ್ನೇಹಿತ ಎಂಬ ಕಾರಣಕ್ಕೆ ನೋಟಿಸ್ ನೀಡಿದ್ದರು. ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಸೋಮವಾರವೂ ವಿಚಾರಣೆಗೆ ಬರುತ್ತೇನೆ ಎಂದು ಹೇಳಿದ್ದಾರೆ.
ಪವಿತ್ರಾಗೌಡ ಆಪ್ತೆ ಸಮತಾಗೆ ನೋಟಿಸ್:
ರೇಣುಕಸ್ವಾಮಿ ಕೊಲೆ ಪ್ರಕರಣದ ೧ನೇ ಆರೋಪಿ ಪವಿತ್ರಾ ಗೌಡ ಆಪ್ತೆಯಾದ ಸಮತಾಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಕೊಲೆ ಘಟನೆ ಮಾರನೇ ದಿನ ಸಮತಾ, ಪವಿತ್ರಾ ಗೌಡ ಮನೆಗೆ ಭೇಟಿ ನೀಡಿದ್ದರು. ಅಂತೆಯೇ ಆರೋಪಿ ಧನರಾಜ್‌ಗೆ ಫೋನ್ ಪೇ ಮುಖಾಂತರ ೩ ಸಾವಿರ ರೂ. ಹಣ ಹಾಕಿದ್ದರು ಎನ್ನಲಾಗಿದೆ. ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುವ ಬಗ್ಗೆ ಪವಿತ್ರಾ ಗೌಡ, ಸಮತಾ ಜತೆಗೆ ಹೇಳಿಕೊಂಡಿರುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ನಟ ದರ್ಶನ್ ಮತ್ತು ಪವಿತ್ರಾ ಗೌಡ ಜೈಲು ಸೇರಿದ ಬಳಿಕ ಸಮತಾ ನಾಲ್ಕೈದು ಬಾರಿ ಜೈಲಿಗೆ ತೆರಳಿ ಭೇಟಿಯಾಗಿ ಬಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲು ಸಮತಾಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net