

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಅದ್ಯಾವ ತರಹ ಮೋಡಿ ಮಾಡಿತ್ತು ಮತ್ತು ದಾಖಲೆಗಳನ್ನು ಸೃಷ್ಟಿಸಿತ್ತು ಎಂಬುದು ಬಹುತೇಕ ಎಲ್ಲ ಭಾರತೀಯರಿಗೆ ಗೊತ್ತಿರುವ ವಿಚಾರ. ಬಿಡುಗಡೆಯಾದ ಬಳಿಕ ಚಿತ್ರಮಂದಿರದಲ್ಲಿ ಒಂದು ರೀತಿಯಲ್ಲಿ ದಾಖಲೆ ಮರೆದರೆ, ಓಟಿಟಿ ವೇದಿಕೆಯಲ್ಲೂ ಸಮಚಲನ ಸೃಷ್ಟಿಸಿತ್ತು. ಅಷ್ಟೇ ಅಲ್ಲ ಟಿವಿಯಲ್ಲಿ ಪ್ರಸಾರವಾದರೂ ಟಿಆರ್ಪಿ ಗಮನಿಸಿದರೆ ಅಲ್ಲಿಯೂ ದಾಖಲೆಯೇ!
ಇಷ್ಟೆಲ್ಲ ದಾಖಲೆ ಮೇಲೆ ದಾಖಲೆ ಬರೆದ ಕನ್ನಡದ ಈ ಮಾಸ್ಟರ್ಪಿಸ್, ಇದೀಗ ಯಾಕೋ ಸಪ್ಪಗಾಗಿದೆ. ಅಂದರೆ, ತೆಲುಗು ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದ್ದ ಈ ಸಿನಿಮಾ, ಇದೀಗ ಅದೇ ನಾಡಲ್ಲಿ ಇಳಿಮುಖಕಂಡಿದೆ. ಹೌದು, ತೆಲುಗು ಪ್ರೇಕ್ಷಕರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರವಾಗಿತ್ತು. ಚಿತ್ರದ ನಿರೀಕ್ಷೆ ಮಟ್ಟ ನೋಡಿದರೆ, ಈ ಹಿಂದಿನ ಹಲವು ಸಿನಿಮಾಗಳ ಟಿಆರ್ಪಿಯನ್ನು ಈ ಚಿತ್ರ ಮುರಿಯಲಿದೆ ಎಂದೇ ಹೇಳಲಾಗಿತ್ತು. ಇದೀಗ ಅದು ಹುಸಿಯಾಗಿದೆ.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ: ಕರಣ್ ಜೋಹರ್ ವಿಚಾರಣೆಯೂ ಇಲ್ಲ!
ಕಳೆದ ಭಾನುವಾರ ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಕೆಜಿಎಫ್ ಪ್ರಸಾರವಾಗಿತ್ತು. ಸಹಜವಾಗಿಯೇ ಚಿತ್ರಕ್ಕೆ ಹೆಚ್ಚಿನ ಹೈಪ್ ಸಹ ಸೃಷ್ಟಿಯಾಗಿತ್ತು. ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದ ಟಿಆರ್‌ಪಿಯನ್ನು ಕೆಜಿಎಫ್ ಮುರಿಯಲಿದೆ ಎಂದೇ ಹೇಳಲಾಗಿತ್ತು. ಆದರೆ, ಅದ್ಯಾವುದು ಈಡೇರಲಿಲ್ಲ. ಕೇವಲ 11.9 ಟಿಆರ್ಪಿ ಪಡೆದು ನಿರಾಸೆ ಮೂಡಿಸಿದೆ. ಮಹೇಶ್ ಬಾಬು ನಟನೆಯ ಸರಿಲೇರು ನೀಕ್ಕೆವರು ಚಿತ್ರ ಬರೋಬ್ಬರಿ 23.4 ಟಿಆರ್ಪಿ ಪಡೆದುಕೊಂಡು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿತ್ತು.
ಇನ್ನು ಟಿಆರ್ಪಿ ಕಡಿಮೆಯಾಗಲು ಕಾರಣ ಹುಡುಕುತ್ತ ಹೋದರೆ ಸಾಕಷ್ಟು ಸಿಗುತ್ತವೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಬಳಿಕ ಅಮೆಜಾನ್ ಪ್ರೈಂನಲ್ಲಿಯೂ ಸಿನಿಮಾ ತೆರೆಕಂಡಿತು. ಅಲ್ಲಿಯೂ ಕೋಟ್ಯಂತರ ವೀಕ್ಷಕರಿಂದ ಸಿನಿಮಾ ನೋಡಲ್ಪಟ್ಟಿತ್ತು. ಅದಾದ ಬಳಿಕ ಒಂದಷ್ಟು ಚಿತ್ರದ ಕಾಪಿ ಹಲವು ವೆಬ್ಸೈಟ್ಗಳಲ್ಲಿ ಸೋರಿಕೆಯಾಗಿದ್ದರಿಂದ ಅಲ್ಲಿಯೂ ಲಕ್ಷಾಂತರ ಮಂದಿಯಿಂದ ವೀಕ್ಷಣೆಯಾಯಿತು. ಹೀಗಾಗಿ ಟಿವಿಯಲ್ಲಿನ ಪ್ರಸಾರಕ್ಕೆ ಟಿಆರ್ಪಿ ನಿರೀಕ್ಷಿತ ಮಟ್ಟ ತಲುಪಲಿಲ್ಲ. (ಏಜೆನ್ಸೀಸ್)