ಸುಶಾಂತ್​ ಆತ್ಮಹತ್ಯೆ: ಕರಣ್​ ಜೋಹರ್​ ವಿಚಾರಣೆಯೂ ಇಲ್ಲ!

Karan Johar - Final
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಕೇಸ್​ನಲ್ಲಿ ಬಾಲಿವುಡ್​ನ ಪ್ರಭಾವಿ ವ್ಯಕ್ತಿಗಳ ಹೆಸರು ತಳುಕು ಹಾಕಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪೈಕಿ ಸಲ್ಮಾನ್​ ಖಾನ್​, ಕರಣ್​ ಜೋಹರ್​, ಸಂಜಯ್​ ಲೀಲಾ ಬನ್ಸಾಲಿ ಮುಂತಾದ ಹಲವು ಖ್ಯಾತನಾಮರ ಹೆಸರು ಸೇರಿಕೊಂಡಿರುವುದು ಈ ಒಂದು ತಿಂಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಈ ಪೈಕಿ, ಈಗಾಗಲೈ ಮುಂಬೈ ಪೊಲೀಸರು, ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರನ್ನ ಕರೆಸಿ ವಿಚಾರಣೆ ನಡೆಸಿದ್ದಾರೆ. ಇನ್ನು, ಈ ಕೇಸ್​ನಲ್ಲಿ ಸಲ್ಮಾನ್​ ಖಾನ್​ ಅವರ ಹೆಸರು ಥಳುಕು ಹಾಕಿಕೊಂಡಿದ್ದರಿಂದ, ಅವರ ವಿಚಾರಣೆಯನ್ನೂ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಸುದ್ದಿ ಸುಳ್ಳಾಗಿದೆ. ಸಲ್ಮಾನ್​ ಖಾನ್​ ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈಗ ಕರಣ್​ ಜೋಹರ್​ ಅವರನ್ನು ವಿಚಾರಣೆಗೆ ಒಳಪಡಿಸುವ ಉದ್ದೇಶವಿಲ್ಲ ಎಂದು ಮುಂಬೈ ಪೊಲೀಸ್​ ಸ್ಪಷ್ಟಪಡಿಸಿದೆ. ಅದಕ್ಕೆ ಕಾರಣವೂ ಇದೆ. ಸುಶಾಂತ್​ ಆತ್ಮಹತ್ಯೆ ಹಿನ್ನೆಲೆಯಲ್ಲಿ ಇದುವರೆಗೂ 35ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾರೊಬ್ಬರೂ ಸಹ ಕರಣ್​ ಹೆಸರು ಪ್ರಸ್ತಾಪ ಮಾಡಿಲ್ಲವಂತೆ. ಹಾಗಾಗಿ ಸುಶಾಂತ್​ ಸಾವಿಗೂ, ಕರಣ್​ ಜೋಹರ್​ಗೂ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ಮುಂಬೈ ಪೊಲೀಸ್​ ಬಂದ ಹಾಗಿದೆ. ಅದೇ ಕಾರಣಕ್ಕೆ, ಕರಣ್​ ಅವರನ್ನು ಈ ವಿಷಯದಲ್ಲಿ ವಿಚಾರಣೆ ಮಾಡಲಾಗುತ್ತಿಲ್ಲ ಎಂದು ಹೇಳಾಗಿದೆ.

ಸುಶಾಂತ್​ ಆತ್ಮಹತ್ಯೆಯಲ್ಲಿ ಕರಣ್​ ಅವರ ನೇರ ಪಾತ್ರ ಇಲ್ಲಿದಿದ್ದರೂ, ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಳೆದ ಒಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗಿದೆ. ಇನ್ನು ಸುಶಾಂತ್​ ಅವರ ಬಿಹಾರದ ಅಭಿಮಾನಿಗಳು, ಕರಣ್​ ಅವರ ಪ್ರತಿಕೃತಿಯನ್ನು ದಹಿಸಿ, ಅವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಇನ್ನು ಮುಂಬೈ ಪೊಲೀಸರು, ಸುಶಾಂತ್​​ ಅವರ ಗೆಳತಿಯಾದ ರಿಯಾ ಚಕ್ರವರ್ತಿ ಅವರ ಹಣಕಾಸಿನ ಸ್ಥಿತಿಗತಿಯ ಬಗ್ಗೆಯೂ ಗಮನಹರಿಸುತ್ತಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ರಿಯಾ ಚಕ್ರವರ್ತಿ ಇತ್ತೀಚಿನ ದಿನಗಳಲ್ಲಿ ಎಷ್ಟು ಖರ್ಚು ಮಾಡಿದ್ದರು, ಅವರ ಹಣಕಾಸಿನ ಮೂಲ ಯಾವುದು, ಅವರೇನಾದರೂ ಸುಶಾಂತ್​ರಿಂದ ಹಣ ಪಡೆದಿದ್ದರಾ... ಮುಂತಾದ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net