

ಬೆಂಗಳೂರು: ನನ್ನ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸದಿರಲು ತೀರ್ಮಾನಿಸಿದ್ದೇನೆ ಎಂದು ನಟಿ ನಿಶ್ವಿಕಾ ನಾಯ್ಡು ತಿಳಿಸಿದ್ದಾರೆ.
ನಿಶ್ವಿಕಾಗೆ ಭಾನುವಾರ(ಮೇ 19)ರಂದು ಹುಟ್ಟಿದ ದಿನ. ಈ ಬಾರಿ ಅವರು 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆರಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಬಾರಿ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ. ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನಾಗಿದ್ದ. ಅವನ ಅನುಪಸ್ಥಿತಿಯು ನಮ್ಮ ಕುಟುಂಬದವರ ಮೇಲೆ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು, ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ. ಉಡುಗೊರೆಗಳನ್ನೂ ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿ ಇರುತ್ತೇನೆ. ಈ ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಜನ್ಮದಿನಕ್ಕೆ ಹರಸಿ ಎಂದು ನಿಶ್ವಿಕಾ ಬರೆದುಕೊಂಡಿದ್ದಾರೆ.