

ಲಖನೌ: ಕೇರಳ ಮೂಲದ ಶಿಕ್ಷಕಿ ಮತ್ತು ಆಕೆಯ ತಂದೆ ಉತ್ತರ ಪ್ರದೇಶದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಡ್ಯಾಂ ಬಳಿಯ ಕಾಲುವೆಗೆ ಬಿದ್ದ ತನ್ನ ಐದು ವರ್ಷದ ಮಗಳನ್ನು ಕಾಪಾಡಲು ಹೋದ ಶಿಕ್ಷಕಿ ಮತ್ತು ತಂದೆ ಇಬ್ಬರು ನೀರುಪಾಲಾಗಿದ್ದು, ಸ್ಥಳೀಯರಿಂದ ಮಗುವಿನ ರಕ್ಷಣೆಯಾಗಿದೆ.
ಮೃತರನ್ನು ನಾಜಿಯಾ ಶರೂನ್ (31) ಮತ್ತು ಟಿ.ಪಿ. ಹಸ್ಸೈನರ್ (61) ಎಂದು ಗುರುತಿಸಲಾಗಿದೆ. ನಾಜಿಯಾ ಉತ್ತರ ಪ್ರದೇಶದ ಲಲಿತ್ಪುರ್ ಜಿಲ್ಲೆಯ ತಲಬೆಹತ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದರು. ಆಕೆಯ ತಂದೆ ಹಸ್ಸೈನರ್, ತಿರುವನಂತಪುರ ಜಿಲ್ಲೆಯ ಕಿಲಿಮನೋರ್ನ ಪುಲಿಮಥ್ ನಿವಾಸಿ.
ಕಳೆದ ಭಾನುವಾರ ಸುಮಾರು 11 ಗಂಟೆಗೆ ದುರಂತ ಸಂಭವಿಸಿದೆ. ನಾಜಿಯಾ ಮತ್ತು ತಂದೆ ಹಸ್ಸೈನರ್, ನಾಜಿಯಾಳ ಒಬ್ಬಳೇ ಪುತ್ರಿ ಫೈಜಿಯನ್ನು ಲಲಿತ್ಪುರ್ನಲ್ಲಿರುವ ಮತಾತಿಲ ಡ್ಯಾಂ ಬಳಿಯಿರುವ ಪಾರ್ಕ್ಗೆ ಕರೆದೊಯ್ದಿದ್ದರು. ಈ ವೇಳೆ ಫೈಜಿ ಕೊಳವೊಂದರ ಬಳಿ ಆಡುತ್ತಿದ್ದ ಫೈಜಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾಳೆ. ಅದೇ ಕೊಳಕ್ಕೆ ಸಂಪರ್ಕವಾಗಿದ್ದ ಕಾಲುವೆಗೆ ಸಿಲುಕಿ ಕೊಚ್ಚಿ ಹೋಗುವಾಗ ಮಗಳನ್ನು ರಕ್ಷಿಸಲು ನಾಜಿಯಾ ಕಾಲುವೆಗೆ ಹಾರಿದ್ದಾಳೆ. ಅದನ್ನು ನೋಡಿ ನಾಜಿಯಾ ತಂದೆಯೂ ಸಹ ಕಾಲುವೆ ಜಿಗಿದಿದ್ದಾರೆ.
ಈ ವೇಳೆ ಸ್ಥಳೀಯರು ಮಗುವನ್ನು ರಕ್ಷಿಸಿದ್ದು, ನಾಜಿಯಾ ಮತ್ತು ಹಸ್ಸೈನರ್ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮುಳುಗು ತಜ್ಞರ ಸಹಾಯದಿಂದ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ. ನಾಜಿಯಾ ವರ್ಷಗಳ ಹಿಂದಷ್ಟೇ ಕೇಂದ್ರಿಯಾ ವಿದ್ಯಾಲಯಕ್ಕೆ ಸೇರಿದ್ದರು. ವಿಜಯ ಬ್ಯಾಂಕ್ನ ನಿವೃತ್ತ ಅಧಿಕಾರಿಯಾಗಿರುವ ಹಸ್ಸೈನರ್ ಲಲಿತ್ಪುರ್ಗೆ ಪ್ರಯಾಣ ಬೆಳೆಸಿ ನಾಜಿಯಾ ಜತೆಗೆ ವಾಸಿಸುತ್ತಿದ್ದರು.
ನಾಜಿಯಾ ಪತಿ ಶರೂನ್ ಇಂಜಿನಿಯರ್ ಆಗಿದ್ದು, ಡಿಜಿಟಲ್ ಮೂವಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಸ್ಸೈನರ್ ಪತ್ನಿ ರಫಿಯಾ ಪುಲಿಮತ್ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ನಜಿಯಾ ಹೊರತಾಗಿ ಹಸ್ಸೈನರ್ ನಾದಿಯಾ ಹೆಸರಿನ ಮತ್ತೊಬ್ಬ ಮಗಳಿದ್ದಾಳೆ. ಇಬ್ಬರ ಮೃತದೇಹವನ್ನು ಉತ್ತರ ಪ್ರದೇಶದಿಂದ ಕೇರಳದ ತವರು ಪುಲಿಮತ್ಗೆ ಮಂಗಳವಾರ ತರಲಾಗಿದ್ದು, ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. (ಏಜೆನ್ಸೀಸ್)