

ಕೇರಳ: ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ದಿನದಿಂದಲೂ ಅನೇಕ ಸ್ಟಾರ್ ನಟಿಯರು ತಮಗಾದ ‘ಕಾಸ್ಟಿಂಗ್ ಕೌಚ್’ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಹಲವು ನಟಿಮಣಿಯರು ಚಿತ್ರರಂಗದ ಕಹಿಸತ್ಯವನ್ನು ಈಗಾಗಲೇ ಬಿಚ್ಚಿಟ್ಟಿದ್ದು, ಕಷ್ಟಕರ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಆಶ್ಚರ್ಯಕರ ಎಂದರೆ ಹೇಮಾ ವರದಿ ಹೊರಬಿದ್ದ ನಂತರ ಇಲ್ಲಿಯವರೆಗೆ ಲೈಂಗಿಕ ಕಿರುಕುಳ ಆರೋಪದಡಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 20ಕ್ಕೂ ಅಧಿಕ. ಸದ್ಯ ಈ ಎಲ್ಲಾ ಕಹಿ ಬೆಳವಣಿಗೆಗಳಿಂದ ಮಾಲಿವುಡ್ ಕಂಗಾಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಷಯ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಇದೀಗ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದ್ದಾರೆ. ನಟನ ಬೆನ್ನಲ್ಲೇ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿದ್ದು, ಕಮಿಟಿಯನ್ನು ವಿಸರ್ಜಿಸಿದ್ದಾರೆ. ತಮ್ಮ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ಘೋಷಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕಮಿಟಿಯ ವಿಸರ್ಜನೆಗೆ ಕಾರಣರಾಗಿದ್ದು ಸದ್ಯ ಚಿತ್ರರಂಗಕ್ಕೆ ಭಾರೀ ಆಶ್ಚರ್ಯ ತಂದಿದೆ.
ಸದ್ಯ ಸಾಲು ಸಾಲು ಕಾಸ್ಟಿಂಗ್ ಕೌಚ್ ಪ್ರಕರಣಗಳನ್ನು ಗಮನಿಸಿದ ಕೇರಳ ಹೈಕೋರ್ಟ್, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸಿದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸದೆ ಕಡೆಗಣಿಸಿದ ರಾಜ್ಯ ಸರ್ಕಾರವನ್ನು ಇಂದು (ಸೆ.10) ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಸಿ.ಎಸ್. ಸುಧಾ ಅವರನ್ನೊಳಗೊಂಡ ವಿಶೇಷ ಪೀಠವು, ಮಾಧ್ಯಮದವರ ಬಾಯಿ ಮುಚ್ಚಿಸಲು ನಿರಾಕರಿಸಿದರೂ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಸರ್ಕಾರ ರಚಿಸಿದ್ದ ಎಸ್‌ಐಟಿಗೆ ಖಡಕ್ ಸೂಚನೆ ನೀಡಿದೆ.
ಈ ವರದಿಯನ್ನು 2019ರಂದೇ ಸರ್ಕಾರಕ್ಕೆ ಸಲ್ಲಿಸಿರುವುದನ್ನು ಗಮನಿಸಿದ ನ್ಯಾಯಾಲಯ, "ಪ್ರಾಥಮಿಕವಾಗಿ ಎಫ್‌ಐಆರ್‌ಗಳನ್ನು ದಾಖಲಿಸದಿರುವುದು ಸೇರಿದಂತೆ ಈ ಪ್ರಕರಣದಲ್ಲಿ ನೀವು ತೋರಿರುವ ಬೇಜವಾಬ್ದಾರಿಯ ಬಗ್ಗೆ ಗಮನಹರಿಸಿದ್ದೇವೆ. ವರದಿ ನೋಡಿದ್ದು ಬಿಟ್ಟರೆ ಈ 4 ವರ್ಷಗಳಲ್ಲಿ ನಿಮ್ಮ ಸರ್ಕಾರ ಏನನ್ನೂ ಸಹ ಮಾಡಿಲ್ಲ. ಇಲ್ಲಿ ಮೌನ ಆಯ್ಕೆಯಲ್ಲ ಎಂಬುದು ಗಮನದಲ್ಲಿರಲಿ. ಮಹಿಳೆಯರ ಮೇಲಿನ 'ಪಕ್ಷಪಾತ ಮತ್ತು ತಾರತಮ್ಯ' ಮೊದಲು ಬದಲಾಗಬೇಕು" ಎಂದು ಕೇರಳ ಸರ್ಕಾರಕ್ಕೆ ಒತ್ತಿ ಹೇಳಿದೆ,(ಏಜೆನ್ಸೀಸ್).