‘ಒಂದು ರಾಷ್ಟ್ರ.. ಒಂದು ಚುನಾವಣೆ’ ನಿರ್ಧಾರ ಹಿಂಪಡೆಯಿರಿ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ | Kerala Asembly

Untitled-design-11
Published on

ಕೊಚ್ಚಿ: ಭಾರತದಾದ್ಯಂತ ಏಕಕಾಲದಲ್ಲಿ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳನ್ನು ಜಾರಿಗೊಳಿಸುವ ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ಅಂಗೀಕರಿಸುವ ತನ್ನ ನಿರ್ಧಾರವನ್ನು ಹಿಂಪಡೆಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ(Kerala Asembly) ಗುರುವಾರ(ಅಕ್ಟೋಬರ್​​ 10) ಅಂಗೀಕರಿಸಿದೆ.

ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ರಾಜ್ಯ ಶಾಸಕಾಂಗ ಸಚಿವ ಎಂ.ಬಿ.ರಾಜೇಶ್ ಮಂಡಿಸಿದರು. ಈ ಪ್ರಸ್ತಾಪವು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರತದ ಸಂಸದೀಯ ಪ್ರಜಾಪ್ರಭುತ್ವದ ವೈವಿಧ್ಯಮಯ ಸ್ವರೂಪಕ್ಕೆ ಹಾನಿ ಮಾಡುತ್ತದೆ

ಪ್ರಸ್ತಾವನೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವೈವಿಧ್ಯಗಳಿಗೆ ಹಾನಿ ಮಾಡುವ ಸಂಘಟಿತ ಪ್ರಯತ್ನವಾಗಿ ನಾವು ನೋಡುತ್ತೇವೆ ಎಂದು ಹೇಳಿದರು. ವೆಚ್ಚವನ್ನು ಕಡಿಮೆ ಮಾಡಲು ಮತ್ತು ಸುಗಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಸರಳವಾದ ಮಾರ್ಗಗಳಿರುವಾಗ, ಈ ಪ್ರಸ್ತಾವನೆಯು ಸಂವಿಧಾನದ ಮೂಲವಾಗಿರುವ ಫೆಡರಲ್ ರಚನೆಯನ್ನು ನಾಶಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಚುನಾವಣೆಗಳನ್ನು ಒಟ್ಟುಗೂಡಿಸುವ ಪ್ರಸ್ತಾಪವು ಭಾರತೀಯ ಜನತಾ ಪಕ್ಷದ 2024ರ ಚುನಾವಣಾ ಪ್ರಣಾಳಿಕೆಯ ಒಂದು ಭಾಗವಾಗಿತ್ತು. ಆದರೆ ಇದು ಪ್ರಜಾಸತ್ತಾತ್ಮಕ ಹೊಣೆಗಾರಿಕೆಯನ್ನು ಘಾಸಿಗೊಳಿಸುತ್ತದೆ ಎಂಬ ಆರೋಪದಿಂದಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಕೆಲ ವರ್ಷಗಳಿಂದ ಹೇಳುತ್ತಿದ್ದ ‘ಒಂದು ದೇಶ...ಒಂದು ಚುನಾವಣೆ’ ಪ್ರಸ್ತಾವನೆಗೆ ಇತ್ತೀಚಿಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿದ ವರದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಔಪಚಾರಿಕವಾಗಿ ಅನುಮೋದನೆ ನೀಡಿದೆ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಆದರೆ, ಪ್ರಸ್ತಾವನೆಗೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿರುತ್ತದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಸ್ತಾವನೆಗೆ ಕೇಂದ್ರ ಹಾಗೂ ರಾಜ್ಯಗಳ ಅನುಮೋದನೆ ಪಡೆಯಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಾಂವಿಧಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಹಲವು ತೊಡಕುಗಳನ್ನು ಹೊಂದಿರುವ ಈ ಪ್ರಸ್ತಾವ ಮುಂದಿನ ತಿಂಗಳುಗಳಲ್ಲಿ ಗದ್ದಲ ಎಬ್ಬಿಸುವುದು ಖಚಿತ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net