

ಮುಂಬೈ: ದೇಶದ ಅಭಿವೃದ್ಧಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ(Ratan Tata) ಅವರು ಬುಧವಾರ(ಅಕ್ಟೋಬರ್ 9) ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ರತನ್ ಟಾಟಾ ಅವರ ನಿಧನಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ದುಃಖ ವ್ಯಕ್ತಪಡಿಸಿ, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದ್ದಾರೆ.
ಭಾರತೀಯ ಕೈಗಾರಿಕಾ ದಿಗ್ಗಜ ರತನ್ ಟಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಮನಮೋಹನ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ. ಅವರು ಭಾರತೀಯ ಉದ್ಯಮದ ಧೀಮಂತರು, ಹಲವರಿಗೆ ಮಾದರಿಯಾಗಿದ್ದರು. ಅವರ ಜೀವನದಲ್ಲಿ ಅವರು ಸ್ಥಾಪಿಸಿದ ಮತ್ತು ಪೋಷಿಸಿದ ಅನೇಕ ದತ್ತಿ ಕಾರ್ಯಗಳಲ್ಲಿ ಅವರ ದೃಷ್ಟಿ ಮತ್ತು ಮಾನವೀಯತೆಯು ಪ್ರತಿಫಲಿಸುತ್ತದೆ ಎಂದು ತಿಳಿಸಿದ್ದಾರೆ.
ಅಧಿಕಾರದಲ್ಲಿರುವವರಿಗೆ ಸತ್ಯವನ್ನು ಹೇಳುವ ಧೈರ್ಯ ಅವರಲ್ಲಿತ್ತು. ರತನ್ ಟಾಟಾ ಅವರೊಂದಿಗೆ ಹಲವು ಸಂದರ್ಭಗಳಲ್ಲಿ ನಿಕಟವಾಗಿ ಕೆಲಸ ಮಾಡಿದ ಬಗ್ಗೆ ನನಗೆ ತುಂಬಾ ಇಷ್ಟವಾದ ನೆನಪುಗಳಿವೆ. ಈ ದುಃಖದ ಸಮಯದಲ್ಲಿ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ರತನ್ ಟಾಟಾ ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು. ಆದರೂ ಅವರು ಯಾವುದೇ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವರು ಆರು ಖಂಡಗಳಲ್ಲಿ 100ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ 30ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದರು. ಆದರೂ ಅವರು ಸರಳ ಜೀವನವನ್ನು ನಡೆಸಿದರು.(ಏಜೆನ್ಸೀಸ್)