

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಈ ಬಾರಿ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿದೆ. 2008ರ ನಂತರ ಮೊದಲ ಬಾರಿಗೆ ಮೂವರು ಮಹಿಳಾ ಶಾಸಕರು ವಿಧಾನಸಭೆಗೆ ಆಗಮಿಸಿದ್ದಾರೆ. ಇದರಲ್ಲಿ ಕಿಶ್ತ್ವಾರ್ ಬಿಜೆಪಿಯ ಶಗುನ್ ಪರಿಹಾರ್, ಹಬ್ಬಕದಲ್‌ನಿಂದ ನ್ಯಾಷನಲ್ ಕಾನ್ಫರೆನ್ಸ್‌ನ ಶಮೀಮ್ ಫಿರ್ದೌಸ್ ಮತ್ತು ಡಿಎಚ್ ಪೋರಾದಿಂದ ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ ಗೆಲುವು ಸಾಧಿಸಿದ್ದಾರೆ.
90 ವಿಧಾನಸಭಾ ಸ್ಥಾನಗಳಿಗೆ 30 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಡಿಎಚ್‌ಪೋರಾದಿಂದ ಸಕೀನಾ ಇಟೂ 17,449 ಮತಗಳಿಂದ ಅತಿ ದೊಡ್ಡ ಗೆಲುವನ್ನು ದಾಖಲಿಸಿದ್ದಾರೆ. ಹಬ್ಬಕದಲ್‌ನಿಂದ ಶಮೀಮ್ ಫಿರ್ದೌಸ್ 953 ಅಂತರಗಳ ಮತದಿಂದ ಗೆಲುವು ಸಾಧಿಸಿದರೆ, ಬಿಜೆಪಿಯ ಶಗುನ್ ಪರಿಹಾರ್ ಅವರು ಕೇವಲ 521 ಮತಗಳ ಅಂತರದಿಂದ ಗೆದಿದ್ದಾರೆ.
2014ರವರೆಗೆ ನಡೆದ 10 ವಿಧಾನಸಭಾ ಚುನಾವಣೆಯಲ್ಲಿ ಕೇವಲ 12 ಮಹಿಳೆಯರು ಮಾತ್ರ ವಿಧಾನಸಭೆಗೆ ಬರಲು ಸಾಧ್ಯವಾಗಿತ್ತು. 11ನೇ ವಿಧಾನಸಭೆಯಲ್ಲಿ ಈ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. 11ನೇ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಶಮೀಮ್ ಫಿರ್ದೌಸ್ ಸತತ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2008 ಮತ್ತು 2014ರ ನಂತರ ಈಗ 2024ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದೆರಡು ಚುನಾವಣೆಗಳಿಗಿಂತ ಈ ಬಾರಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. 2024ರ ಚುನಾವಣೆಯಲ್ಲಿ ಅವರು 12,437 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು 9,538 ಮತಗಳ ಅಂತರದಿಂದ ಸೋಲಿಸಿದರು. 2008ರಲ್ಲಿ ಅವರ ಗೆಲುವಿನ ಅಂತರ 1,702 ಮತಗಳಾಗಿದ್ದರೆ, 2014ರಲ್ಲಿ ಈ ಅಂತರ 2,359 ಆಗಿತ್ತು.
ಡಿಎಚ್ ಪೋರಾದಿಂದ ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ ಅವರು ಪಿಡಿಪಿಯ ಗುಲ್ಜಾರ್ ಅಹ್ಮದ್ ದೋರ್ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಕೀನಾ ಇಟೂ ಅವರ ತಂದೆ ವಾಲಿ ಮೊಹಮ್ಮದ್ ಇಟೂ ಪ್ರಮುಖ ರಾಜಕೀಯ ವ್ಯಕ್ತಿಯಾಗಿದ್ದರು. 1994ರಲ್ಲಿ ಉಗ್ರರ ಗುಂಡಿಗೆ ಬಲಿಯಾದರು. ಕಿಶ್ತ್ವಾರ್‌ನ ಬಿಜೆಪಿ ಅಭ್ಯರ್ಥಿ ಶಗುನ್ ಪರಿಹಾರ್ ಅವರು ಅತ್ಯಂತ ಕಿರಿಯ ಶಾಸಕರಾಗಿದ್ದಾರೆ. ಅವರು 521 ಮತಗಳ ಅಂತರದಿಂದ ನ್ಯಾಷನಲ್ ಕಾನ್ಫರೆನ್ಸ್ ಮಾಜಿ ಶಾಸಕ ಮತ್ತು ಸಚಿವ ಸಜ್ಜ ಕುಚ್ಲು ಅವರನ್ನು ಸೋಲಿಸಿದ್ದಾರೆ. ಭಯೋತ್ಪಾದಕರ ಗುಂಡಿಗೆ ಬಲಿಯಾದ ಬಿಜೆಪಿಯ ಮಾಜಿ ರಾಜ್ಯ ಕಾರ್ಯದರ್ಶಿ ಅನಿಲ್ ಪರಿಹಾರ್ ಅವರ ಕುಟುಂಬದ ಸದಸ್ಯೆ ಇವರು.(ಏಜೆನ್ಸೀಸ್)